ನರೇಗಲ್ಲ: ಸಮೀಪದ ಹಾಲಕೆರೆಯಲ್ಲಿ ಶ್ರೀ ಅನ್ನದಾನೇಶ್ವರರ 173ನೇ ರಥೋತ್ಸವ ಅತ್ಯಂತ ಸಡಗರ, ಸಂಭ್ರಮಗಳಿಂದ ರವಿವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಹರಹರ ಮಹಾದೇವ, ಶ್ರೀ ಅನ್ನದಾನೇಶ್ವರ ಮಹಾರಾಜಕೀ ಜೈ ಎಂಬಿತ್ಯಾದಿ ಘೋಷಣೆಗಳು ಮುಗಿಲು ಮುಟ್ಟಿದ್ದವು. ಕರಡಿ ಮಜಲು, ಜಾಂಜ್ ಮೇಳ, ಕೋಲಾಟ ಮುಂತಾದವುಗಳು ಜಾತ್ರೆಯ ಸಡಗರವನ್ನು ಹೆಚ್ಚಿಸಿದ್ದವು. ಬಣ್ಣಬಣ್ಣದ ಸೀರೆಯುಟ್ಟ ಸುಮಂಗಲೆಯರು ಆರತಿಯನ್ನು ಹಿಡಿದು ತೇರಿನ ಹಿಂದೆ ಸಾಗಿದರು.
ಸಂಜೆಯಾಗುತ್ತಿದ್ದಂತೆ ಶ್ರೀಮಠದ ಪೀಠಾಧಿಪತಿ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮತ್ತು ಹರಗುರು ಚರ ಮೂರ್ತಿಗಳು, ಗಣ್ಯರು ತೇರಿನ ಕಡೆಗೆ ಸಾಗಿದರು.
ರಥದ ಗಾಲಿಗಳಿಗೆ ಪೂಜೆ ನೆರವೇರಿಸಿದ ನಂತರ ಸೇರಿದ್ದ ಸಹಸ್ರಾರು ಜನರು ಶ್ರೀ ಅನ್ನದಾನೇಶ್ವರ ಮಹಾರಾಜ ಕೀ ಜೈ, ಹಿರಿಯ ಅನ್ನದಾನ ಮಹಾಸ್ವಾಮಿಗಳಿಗೆ ಜಯವಾಗಲಿ, ಗುರು ಅನ್ನದಾನ ಮಹಾಸ್ವಾಮಿಗಳಿಗೆ ಜಯವಾಗಲಿ, ಅಭಿನವ ಅನ್ನದಾನ ಮಹಾಸ್ವಾಮಿಗಳಿಗೆ ಜಯವಾಗಲಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಲೆ ನೆರೆದ ಮಹಾ ಜನತೆ ತೇರನ್ನು ಎಳೆಯಲು ಪ್ರಾರಂಭಿಸಿದರು.
ಪಾದಗಟ್ಟೆಯವರೆಗೆ ಚಲಿಸಿದ ರಥವು ಮರಳು ಸ್ವಸ್ಥಾನ ಸೇರಿದಾಗ ಜನತೆ ಸಂತೋಷದಿಂದ ಚಪ್ಪಾಳೆ ತಟ್ಟಿ ತಮ್ಮ ಹರುಷವನ್ನು ವ್ಯಕ್ತಪಡಿಸಿದರು.