ಮಗಳ ವಿಚಾರವಾಗಿ ಪತ್ನಿಯನ್ನು ಅಪಹರಿಸಿದ್ದಾಗಿ ಆರೋಪದ ಮೇಲೆ ಸ್ಯಾಂಡಲ್ ವುಡ್ ನಿರ್ಮಾಪಕ ಹರ್ಷವರ್ಧನ್ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರ್ಷವರ್ಧನ್ 2023ರಲ್ಲಿ ಕಿರುತೆರೆ ನಟಿ ಚೈತ್ರಾ ಅವರನ್ನು ವಿವಾಹವಾಗಿದ್ದು, ದಂಪತಿಗೆ ಒಂದು ವರ್ಷದ ಮಗಳು ಇದ್ದಾಳೆ.
ಮಗು ಹುಟ್ಟಿದ ನಂತರ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮಗಳಿಗಾಗಿ ಹರ್ಷವರ್ಧನ್ ಪತ್ನಿಯನ್ನು ಅಪಹರಿಸಿದ್ದಾರೆ ಎಂಬ ಆರೋಪ ಈಗ ಹೊರಬಂದಿದೆ. ದೂರಿನ ಪ್ರಕಾರ, ಮೈಸೂರಿಗೆ ಚಿತ್ರೀಕರಣವಿದೆ ಎಂದು ಹೇಳಿ ಚೈತ್ರಾರನ್ನು ಕರೆಸಿಕೊಂಡು, ಸ್ನೇಹಿತನ ಸಹಾಯದಿಂದ ಅಪಹರಿಸಲಾಗಿದೆ.
ಸೀರಿಯಲ್ ಚಿತ್ರೀಕರಣಕ್ಕೆ ಅಡ್ವಾನ್ಸ್ ಎಂದು 20 ಸಾವಿರ ರೂಪಾಯಿ ನೀಡಿ, ಮೈಸೂರಿಗೆ ಬಂದ ಬಳಿಕ ಪತ್ನಿಯನ್ನು ಕಿಡ್ನಾಪ್ ಮಾಡಿ, ಮಗಳನ್ನು ಕಳುಹಿಸುವಂತೆ ಅತ್ತೆಗೆ ಫೋನ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಬೆಳವಣಿಗೆಯಿಂದ ಕುಟುಂಬದಲ್ಲಿ ಆತಂಕ ಸೃಷ್ಟಿಯಾಗಿತ್ತು.
ಅಪಹರಣದ ಮಾಹಿತಿ ತಿಳಿಯುತ್ತಿದ್ದಂತೆ ಚೈತ್ರಾ ಅವರ ಸೋದರಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಸಂಪರ್ಕಿಸಿದ ಬಳಿಕ ಪತ್ನಿಯನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಷವರ್ಧನ್, ಚೈತ್ರಾ ಹಾಗೂ ಇತರರನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.



