ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹಲವು ವರ್ಷಗಳಿಂದ ಸಿನಿರಂಗ ಮತ್ತು ರಾಜಕೀಯದಿಂದ ದೂರವಿರುವ ರಮ್ಯಾ, ತಮ್ಮ ‘ಸೆಕೆಂಡ್ ಇನ್ನಿಂಗ್ಸ್’ ಬಗ್ಗೆ ಆಗಾಗ ಕೇಳಿಬರುವ ಪ್ರಶ್ನೆಗೆ ಇದೀಗ ಖುದ್ದು ಉತ್ತರ ನೀಡಿದ್ದಾರೆ. 44ನೇ ವಸಂತಕ್ಕೆ ಕಾಲಿಟ್ಟಿರುವ ಮೋಹಕತಾರೆ, ಅಭಿ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟು, ದೀರ್ಘಕಾಲ ಕನ್ನಡದ ಅಗ್ರ ನಟಿಯಾಗಿ ಮೆರೆದಿದ್ದಾರೆ.
2013ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ರಮ್ಯಾ, ಅದೇ ವರ್ಷ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆಗೂ ಆಯ್ಕೆಯಾಗಿದ್ದರು. ಆದರೆ ಬಳಿಕ ನಡೆದ ಚುನಾವಣೆಯಲ್ಲಿ ಸೋತ ನಂತರ, ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ನಿರ್ವಹಣೆಯ ಜವಾಬ್ದಾರಿಯನ್ನು ಸ್ವೀಕರಿಸಿ ಕೆಲವು ವರ್ಷಗಳ ಕಾಲ ರಾಜಕೀಯದಲ್ಲಿ ಮುಂದುವರಿದರು. ನಂತರ ಕ್ರಮೇಣ ಸಿನಿಮಾ ಹಾಗೂ ರಾಜಕೀಯ ಎರಡರಿಂದಲೂ ದೂರ ಉಳಿದಿದ್ದಾರೆ.
ರಮ್ಯಾ ಮತ್ತೆ ನಟನೆಯತ್ತ ಮರಳಬೇಕೆಂಬುದು ಅಭಿಮಾನಿಗಳ ಬಹುಕಾಲದ ಆಶೆ. ಎರಡು ವರ್ಷಗಳ ಹಿಂದೆ ಡಾಲಿ ಧನಂಜಯ್ ಅಭಿನಯದ ‘ಉತ್ತರಕಾಂಡ’ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಾಗಿದ್ದರೂ, ಮುಹೂರ್ತಕ್ಕೆ ಹಾಜರಾಗಿದರೂ ಅಂತಿಮ ಕ್ಷಣದಲ್ಲಿ ಚಿತ್ರದಿಂದ ಹೊರಬಂದಿದ್ದರು. ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ, ನಿರ್ಮಾಣದ ಮೊದಲ ಚಿತ್ರದಲ್ಲೇ ನಟಿಸುತ್ತೇನೆ ಎಂದು ಘೋಷಣೆ ಮಾಡಿದ್ದರೂ, ಆ ಯೋಜನೆಯೂ ಮುಂದೆ ಸಾಗಲಿಲ್ಲ.
ಈಗ, ರಮ್ಯಾ ಮತ್ತೆ ತಮ್ಮ ಎರಡನೇ ಇನಿಂಗ್ಸ್‌ಗೆ ಸಜ್ಜಾಗುತ್ತಿರುವುದಾಗಿ ತಿಳಿಸಿ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ 40ಕ್ಕೂ ಹೆಚ್ಚು ಕಥೆಗಳನ್ನು ಕೇಳಿರುವ ರಮ್ಯಾ, ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡಿದ್ದು, ಶೀಘ್ರದಲ್ಲೇ ಹೊಸ ಚಿತ್ರಕ್ಕೆ ಬಣ್ಣ ಹಚ್ಚಲಿದ್ದೇನೆ ಎಂದು ಹೇಳಿದ್ದಾರೆ. ಒಬ್ಬ ಅನುಭವಿ ನಿರ್ದೇಶಕರ ಸಿನಿಮಾದಲ್ಲಿ ನಟಿಸುವುದು ಖಚಿತವಾಗಿದೆ ಎನ್ನಲಾಗಿದೆ.
ಇದಕ್ಕೂ ಜೊತೆ ದಶಕಗಳ ಹಿಂದೆ ರಮ್ಯಾ–ಉಪೇಂದ್ರ ಜೋಡಿಯ ‘ರಕ್ತಕಾಶ್ಮೀರ’ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳಲ್ಲಿ ಮತ್ತೊಂದು ಉತ್ಸಾಹ ಮೂಡಿಸಿದೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ‘ಚೆನ್ನಭೈರಾದೇವಿ’ ಚಿತ್ರದ ಕಥೆ ಕೇಳಲು ಸಿದ್ಧವಾಗಿದ್ದೇನೆ ಎಂದು ರಮ್ಯಾ ತಿಳಿಸಿದ್ದಾರೆ.
ಇದಲ್ಲದೆ ದರ್ಶನ್ ಅಭಿಮಾನಿಗಳೊಂದಿಗೆ ನಡೆದ ಜಟಾಪಟಿಯ ಕುರಿತು ಮಾತನಾಡಿದ ರಮ್ಯಾ, ತಮ್ಮ ಕುರಿತು ಅಸಭ್ಯ ಕಾಮೆಂಟ್ ಮಾಡಿದ ಡಿ-ಫ್ಯಾನ್ಸ್ ಸದಸ್ಯರು ಜೈಲಿಗೆ ಹೋಗಿ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ, ಅವರನ್ನು ನಾನು ಕ್ಷಮಿಸಿದ್ದೇನೆ ಎಂದು ಹೇಳಿದ್ದಾರೆ.



