ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಹಿರಿಯ ನಟಿಯರಾದ ಜಯಮಾಲ, ಶೃತಿ, ಮಾಳವಿಕಾ ಇದೀಗ ಡಿಸಿಎಂ ಡಿಕೆಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಡಿಕೆಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಡಿಸಿಎಂ ಭೇಟಿ ಬಳಿಕ ಹಿರಿಯ ನಟಿ ಜಯಮಾಲ ಪ್ರತಿಕ್ರಿಯಿಸಿ, ಡಾ.ವಿಷ್ಣುವರ್ಧನ್ ಅವರಿಗೆ ಈ ತಿಂಗಳು 75 ವರ್ಷ ತುಂಬಲಿದೆ. ಅವರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡುವಂತೆ ಮನವಿ ಮಾಡಿದ್ದೇವೆ. ಸಿಎಂ ಗೂ ಮನವಿ ಸಲ್ಲಿಸಿದ್ದೆವು. ಇವತ್ತು ಡಿಸಿಎಂಗೂ ಈ ಕುರಿತು ಮನವಿ ಸಲ್ಲಿಸಿದ್ದೇವೆ ಎಂದರು.
ಡಿಕೆಶಿ ಅವರು ಬಹಳ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರು ಚಿತ್ರರಂಗದವರೆ ಆಗಿರೋದ್ರಿಂದ ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ. ಸರೋಜಾದೇವಿ ಅವರು ವಾಸವಾಗಿದ್ದ ಮಲ್ಲೇಶ್ವರಂ 11 ನೇ ಕ್ರಾಸ್ ಗೆ ಅವರ ಹೆಸರನ್ನ ನಾಮಕರಣ ಮಾಡಲು ಕೇಳಿದ್ದೇವೆ. ಅದನ್ನು ಮಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.