ಸಂಘ ದೇಶಪ್ರೇಮ, ಶಿಸ್ತನ್ನು ಕಲಿಸುತ್ತದೆ: ಚೇತನ ಮೆಹರವಾಡೆ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರಾಷ್ಟ್ರೀಯ ಸ್ವಯಂಸೇವಕ ಸಂಘವು ಎಂದಿಗೂ ದ್ವೇಷಿಸು, ಯಾರನ್ನಾದರೂ ಹೊಡಿಬಡಿ ಎಂದು ಹೇಳುವುದಿಲ್ಲ. ಬದಲಿಗೆ ತನ್ನ ಕಾರ್ಯಕರ್ತರಿಗೆ ದೇಶಪ್ರೇಮ, ಶಿಸ್ತು ಮತ್ತು ಸಂಸ್ಕಾರವನ್ನು ಕಲಿಸುತ್ತದೆ ಎಂದು ಸಂಘದ ಗದಗ ಜಿಲ್ಲಾ ಶಾರೀರಿಕ ಪ್ರಮುಖ ಚೇತನ ಮೆಹರವಾಡೆ ಹೇಳಿದರು.

Advertisement

ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನರೇಗಲ್ಲದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಏರ್ಪಡಿಸಿದ್ದ ವಿಜಯದಶಮಿ ಶತಾಬ್ದಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದ ಸ್ವಾಮಿ ವಿವೇಕಾನಂದರ ವಾಣಿಯಂತೆ ಸದೃಢ ಸಮಾಜ ರಚನೆಯಾಗಬೇಕಾದರೆ, ಸದೃಢ ಯುವ ಶಕ್ತಿ ಬೇಕು. ಅದಕ್ಕಾಗಿ ಸಂಘದ ಶಾಖೆಗಳಲ್ಲಿ ಸ್ವಯಂಸೇವಕರಿಗೆ ಕಬ್ಬಡ್ಡಿ ಆಟದ ಜೊತೆಗೆ ಇನ್ನಿತರ ದೈಹಿಕ ಶಕ್ತಿ ನೀಡುವ ಆಟಗಳನ್ನು ಆಡಿಸಿ ಅವರಲ್ಲಿ ಸ್ಫೂರ್ತಿಯನ್ನು ತುಂಬುವ ಕಾರ್ಯವನ್ನು ಮಾಡುತ್ತಿದೆ. ಪ್ರತಿ ವರ್ಷದ ವಿಜಯದಶಮಿಯ ದಿನವನ್ನು ಸಂಘದ ಸಂಸ್ಥಾಪನಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಬೇರೆ ಬೇರೆ ಕಡೆಗಳಲ್ಲಿ ಕಾರ್ಯಕ್ರಮಗಳು ಆಯೋಜನೆಯಾಗಿದ್ದರಿಂದ ನರೇಗಲ್ಲದಲ್ಲಿ ಇಂದು ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತಿದೆ. ಇಂದಿನ ಈ ಕಾರ್ಯಕ್ರಮದಲ್ಲಿ ಗಣವೇಷಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅನೇಕ ಗಣ್ಯರು ಮತ್ತು ಮಾತೆಯರು ಪಾಲ್ಗೊಂಡಿರುವುದು ಸಂತೋಷವನ್ನು ನೀಡಿದೆ ಎಂದು ಹೇಳಿದರು.

ಈಗ್ಗೆ ಕೆಲವು ವರ್ಷಗಳ ಹಿಂದೆ ನಾನು ಹಿಂದೂ ಎಂದು ಹೇಳಿಕೊಳ್ಳಲು ಹಿಂಜರಿಯುವಂತಹ ಪರಿಸ್ಥಿತಿಯಿತ್ತು. ಆದರೆ ಇಂದು ಎಲ್ಲರೂ ಜಾಗೃತರಾಗಿರುವದರಿಂದ ಅತ್ಯಂತ ಗರ್ವದಿಂದ ಹಿಂದೂ ಎಂದು ಹೇಳಿಕೊಳ್ಳಲು ಯಾರೂ ಮುಜುಗುರಪಡುತ್ತಿಲ್ಲ. ಅಲ್ಲದೆ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಎಲ್ಲರೂ ಸಂಘದ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳುತ್ತಿರುವುದು ಜನರಲ್ಲಿ ದೇಶಾಭಿಮಾನ ಜಾಗೃತಿಯಾಗಿರುವುದನ್ನು ತೋರಿಸುತ್ತದೆ. ಅ.12ರ ಮಧ್ಯಾಹ್ನ ಗದಗನಲ್ಲಿ ದೊಡ್ಡ ಮಟ್ಟದಲ್ಲಿ ಸಂಸ್ಥಾಪನಾ ದಿನದ ಶತಾಬ್ದಿ ಆಚರಣೆ ಜರುಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಆಮಂತ್ರಿಸಿದರು.

ಕಾರ್ಯಕ್ರಮದಲ್ಲಿ 72 ಗಣವೇಷಧಾರಿಗಳು, ಬಾಲ ಗಣವೇಷಧಾರಿಗಳು ಮತ್ತು ಗಣ್ಯರು ಪಾಲ್ಗೊಂಡಿದ್ದರು.

ಸಂಘವು ದೇಶದ ಅನೇಕ ಸಂಕಷ್ಟದ ಸಮಯದಲ್ಲಿ ಭಾಗಿಯಾಗಿ ಲಕ್ಷಾಂತರ ಜನರ ಕಣ್ಣೀರನ್ನು ಒರೆಸಿದೆ. ಆಪತ್ತಿನ ಸಂದರ್ಭಗಳಲ್ಲಿ ತನ್ನ ಸಹಾಯ ಹಸ್ತವನ್ನು ಚಾಚಿದೆ. ಈ ಸಂಘವನ್ನು ಕಟ್ಟುವಾಗ ಸಂಸ್ಥಾಪಕ ಹೆಡ್ಗೇವಾರ್ ಏನೆಲ್ಲ ಕನಸುಗಳನ್ನು ಕಂಡಿದ್ದರೋ ಅದನ್ನು ನನಸು ಮಾಡುವತ್ತ ಸಂಘವು ದಿಟ್ಟ ಹೆಜ್ಜೆಯನ್ನಿಡುತ್ತಿದೆ ಎಂದು ಚೇತನ ಮೆಹರವಾಡೆ ತಿಳಿಸಿದರು.


Spread the love

LEAVE A REPLY

Please enter your comment!
Please enter your name here