ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ತಾಲೂಕಿನಲ್ಲಿ ಸಂಜೀವಿನಿ ಯೋಜನೆ (ಎನ್‌ಆರ್‌ಎಲ್‌ಎಂ) ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಇರುವ ಮಹಿಳಾ ಗುಂಪುಗಳ ರಚನೆ ಮಾಡುವ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ಉನ್ನತಿ ಹೊಂದಲು ಸಹಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆ ಸ್ವಾವಲಂಬಿಯಾಗಲು ಮತ್ತು ಅವಳ ಆಂತರಿಕ ಶಕ್ತಿಯ ಪ್ರಜ್ಞೆಯನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ನಿರ್ಮಿಸುವ ಪ್ರಕ್ರಿಯೆಯಾಗಿದೆ.
ಭಾರತದಲ್ಲಿ ಹೈನುಗಾರಿಕೆಯು ಮಹಿಳಾ ಪ್ರಾಬಲ್ಯದ ಉದ್ಯಮವಾಗಿದೆ. ಮಹಿಳೆಯರು ತಮ್ಮ ದೈನಂದಿನ ಮನೆಕೆಲಸಗಳ ಜೊತೆಗೆ ಹೈನುಗಾರಿಕೆ ಮತ್ತು ಪಶುಸಂಗೋಪನೆ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ತಾ.ಪಂ ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆ ಮತ್ತು ಕೆ.ಎಂ.ಎಫ್ ಇವರುಗಳ ಸಹಯೋಗದಲ್ಲಿ ತಾಲೂಕಿನ ಸುಗ್ನಳ್ಳಿ, ಸಾಸಲವಾಡ, ಕೊಂಚಿಗೇರಿ, ದೇವಿಹಾಳ ಮತ್ತು ಕಡಕೋಳ ಗ್ರಾಮಗಳಲ್ಲಿ ಸ್ವ-ಸಹಾಯ ಸಂಘಗಳ ನೇತೃತ್ವದಲ್ಲಿ ಮಹಿಳಾ ಹಾಲು ಉತ್ಪಾದಕರ ಸಂಘಗಳು ಕಳೆದ 5 ವರ್ಷಗಳಿಂದ ಸ್ಥಾಪಿತವಾಗಿದೆ.
ಈ ಮಹಿಳಾ ಡೈರಿ ಉತ್ಪಾದನಾ ಚಟುವಟಿಕೆಗಳಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಸಮಯವನ್ನು ಕಳೆಯುತ್ತಾರೆ. ತರಬೇತಿಯು ಸಬಲೀಕರಣದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದು ಜ್ಞಾನವನ್ನು ಹೆಚ್ಚಿಸುತ್ತದೆ, ಕೌಶಲ್ಯವನ್ನು ಸುಧಾರಿಸುತ್ತದೆ ಮತ್ತು ಗ್ರಾಮೀಣ ಮಹಿಳೆಯರ ಮನೋಭಾವವನ್ನು ಬದಲಾಯಿಸುತ್ತದೆ. ತಳಿಯ ಆಯ್ಕೆ, ಸ್ಥಳೀಯವಾಗಿ ಲಭ್ಯವಿರುವ ಪದಾರ್ಥಗಳನ್ನು ಬಳಸಿಕೊಂಡು ಸಮತೋಲಿತ ಆಹಾರವನ್ನು ಸಂಯೋಜಿಸುವುದು, ಗರ್ಭಾವಸ್ಥೆಯಲ್ಲಿ ಆಹಾರ ನೀಡುವುದು, ಆರೋಗ್ಯ ರಕ್ಷಣೆ, ಬ್ಯಾಂಕಿಂಗ್ ಮತ್ತು ವಿಮೆ ಹೈನುಗಾರಿಕೆಯಲ್ಲಿ ತರಬೇತಿಯ ಅತ್ಯಂತ ಆದ್ಯತೆಯ ಕ್ಷೇತ್ರಗಳಾಗಿವೆ. ನೂರಾರು ಮಹಿಳೆಯರಿಗೆ ಡೈರಿ ಫಾರ್ಮ್ ಕುರಿತು ತರಬೇತಿಗಳನ್ನು ನೀಡಲಾಗಿದೆ.
ಸಾಲ ಸೌಲಭ್ಯಗಳು: ಸಾವಿರಾರು ಮಹಿಳಾ ಹಾಲು ಉತ್ಪಾದಕ ಸದಸ್ಯರಿಗೆ ಹೈನುಗಾರಿಕೆ ಉತ್ತೇಜನ ನೀಡಲು ಸಂಜೀವಿನಿ ಮಹಿಳಾ ಒಕ್ಕೂಟ ಮತ್ತು ಬ್ಯಾಂಕ್ ಮೂಲಕ ಸಾಲವನ್ನು ಕಡಿಮೆ ಬಡ್ಡಿ ದರಗಳಲ್ಲಿ ಒದಗಿಸಲಾಗಿದೆ.
ಪ್ರಗತಿ ಆದ್ಯತೆ: ಮಹಿಳಾ ಹಾಲು ಉತ್ಪಾದಕ ಸಹಕಾರಿ ಸಂಘಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಮಹಿಳೆಯರೇ ಇರುವುದರಿಂದ ಸಂಪೂರ್ಣವಾಗಿ ಆಡಳಿತ ಮತ್ತು ಡೈರಿಯನ್ನು ನಿರ್ವಹಣೆ ಮಹಿಳೆಯರು ಮಾಡುತ್ತಾರೆ.
ಹಾಲಿನ ಉತ್ಪಾದನೆ: ತಾಲೂಕಿನಲ್ಲಿ ಮಹಿಳಾ ಹಾಲು ಉತ್ಪಾದಕ ಸಹಕಾರಿ ಸಂಘಗಳ ಮೂಲಕ ಪ್ರತಿ ದಿನ ಸುಮಾರು 1 ಸಾವಿರದಿಂದ 1200 ಲೀ. ಹಾಲು ಉತ್ಪಾದನೆ ಮೂಲಕ ಮಾಸಿಕ ಲಕ್ಷಾಂತರ ರೂಪಾಯಿಗಳವರೆ ವಹಿವಾಟು ನಡೆಯುತ್ತಿದೆ.
ಹೊಸ ಡೈರಿ ಸಮೀಕ್ಷೆ: ಈಗಾಗಲೇ ತಾಲೂಕಿನ ಹೊಸ ಡೈರಿ ಪ್ರಾರಂಭ ಮಾಡುವ ಉದ್ದೇಶದಿಂದ ಕೆಎಂ ಎಫ್ ಮತ್ತು ಪಶುಪಾಲನೆ ಇಲಾಖೆಯ ಸಹಯೋಗದಲ್ಲಿ ಕನಕವಾಡ, ಜಲ್ಲಿಗೇರಿ, ಭಾವನೂರ, ಕಲ್ಲಾಗನೂರ, ಕಕ್ಕೂರಗುಂದಿ, ಪರಸಾಪೂರ ಸೇರಿದಂತೆ ಇತರ ಗ್ರಾಮಗಳಲ್ಲಿ ಪಶು ಸಖಿಯವರ ಮೂಲಕ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ.
ಸಂಜೀವಿನಿ ಯೋಜನೆಯಡಿ ನಮ್ಮ ಗ್ರಾಮದಲ್ಲಿ ಮಹಿಳಾ ಹಾಲು ಉತ್ಪಾದಕರ ಸಂಘ ಆರಂಭಿಸುವ ಮೂಲಕ ಮಹಿಳೆಯರಿಗೆ ಸಾಲ ಸೌಲಭ್ಯಗಳು, ಸಲಹೆ, ಮಾರ್ಗದರ್ಶನ ಮತ್ತು ತರಬೇತಿ ನೀಡಿದ್ದಾರೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಮುಂದೆ ಬರಲು ಅನುಕೂಲವಾಗಿದೆ.
– ಲಕ್ಷ್ಮವ್ವ ಕಲ್ಲಳ್ಳಿ.
ಸ್ವ-ಸಹಾಯ ಸಂಘದ ಸದಸ್ಯರು, ದೇವಿಹಾಳ.
ಒಟ್ಟಾರೆ ತಾಲೂಕಿನಲ್ಲಿ ಸಾವಿರಾರು ರೈತ ಮಹಿಳೆಯರು ಕೃಷಿ ಜೊತೆಗೆ ಹೈನುಗಾರಿಕೆಯ ಚಟುವಟಿಕೆಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗಿದೆ. ಹಾಲು ಉತ್ಪಾದಕ ಕೇಂದ್ರಗಳನ್ನು ಸ್ಥಾಪಿಸಿ ಸಲಹೆ, ಮಾರ್ಗದರ್ಶನ, ಸಾಲ ಸೌಲಭ್ಯಗಳನ್ನು ಒದಗಿಸಿದ ಸಂಜೀವಿನಿ ಯೋಜನೆ ಮತ್ತು ಕೆಎಂಎಫ್ ಸಿಬ್ಬಂದಿಗಳಿಗೆ ತಾಲೂಕಿನ ಎಲ್ಲಾ ಮಹಿಳಾ ಹಾಲು ಉತ್ಪಾದಕರ ಪರವಾಗಿ ಸದಸ್ಯರು ಕೃತಜ್ಞತೆ ತಿಳಿಸಿದ್ದಾರೆ.