ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್ ಅವರ ಅದ್ಭುತ ಬ್ಯಾಟಿಂಗ್ ಆಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ 20 ಓವರ್‌ಗಳಲ್ಲಿ 195 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಭಾರತ ಪರ ಸಂಜು ಸ್ಯಾಮ್ಸನ್ ಕೇವಲ 50 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 12 ಫೋರ್‌ಗಳೊಂದಿಗೆ ಅಜೇಯ 97 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.
ಸ್ಯಾಮ್ಸನ್ ಅವರ ಅಜೇಯ ಇನಿಂಗ್ಸ್ ನೆರವಿನಿಂದ ಭಾರತ 19.2 ಓವರ್‌ಗಳಲ್ಲಿ 199 ರನ್‌ಗಳಿಸಿ 5 ವಿಕೆಟ್‌ಗಳ ಗೆಲುವು ಸಾಧಿಸಿತು. ನಿರೀಕ್ಷೆಯಂತೆ ಈ ಪಂದ್ಯದಲ್ಲಿ ಮಿಂಚಿದ ಸ್ಯಾಮ್ಸನ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಲಭಿಸಿತು.
ಪಂದ್ಯದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, “ನಾನು ಕ್ರಿಕೆಟ್ ಆಡಲು ಆರಂಭಿಸಿದ ದಿನದಿಂದ ದೇಶಕ್ಕಾಗಿ ಆಡಬೇಕು ಎಂಬ ಕನಸು ಕಂಡಿದ್ದೆ. ಇಂತಹ ಒಂದು ಇನಿಂಗ್ಸ್ ಆಡುವುದು ನನ್ನ ಕನಸಾಗಿತ್ತು. ಇಂದು ಅದು ನನಸಾಗಿದೆ,” ಎಂದು ಸಂತಸ ವ್ಯಕ್ತಪಡಿಸಿದರು.
“ನನ್ನ ಕ್ರಿಕೆಟ್ ಪ್ರಯಾಣದಲ್ಲಿ ಹಲವಾರು ಏರಿಳಿತಗಳು ಇದ್ದವು. ಕೆಲವೊಮ್ಮೆ ನನ್ನನ್ನೇ ನಾನು ಪ್ರಶ್ನಿಸಿದ್ದೆ – ನಾನು ಇಂತಹ ಇನಿಂಗ್ಸ್ ಆಡಬಹುದೇ ಎಂದು. ಆದರೆ ನಾನು ನನ್ನ ಮೇಲೆ ನಂಬಿಕೆ ಇಟ್ಟುಕೊಂಡಿದ್ದೆ. ಇಂದು ಆ ನಂಬಿಕೆ ಫಲ ನೀಡಿದೆ. ಇಂತಹ ಅವಕಾಶ ನೀಡಿದ ದೇವರಿಗೆ ಧನ್ಯವಾದಗಳು,” ಎಂದು ಅವರು ಹೇಳಿದರು.
ಸಂಜು ಸ್ಯಾಮ್ಸನ್ ಅವರ ಈ ಅದ್ಭುತ ಪ್ರದರ್ಶನದೊಂದಿಗೆ ಭಾರತ ತಂಡ ಟೂರ್ನಿಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.



