ಸಂಸ್ಕೃತ ದೇಶದ ಸಂಸ್ಕೃತಿಯ ಪ್ರತೀಕ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಭಾರತೀಯ ಭಾಷೆಗಳಿಗೆಲ್ಲ ಮೂಲಾಧಾರವಾದ ಸಂಸ್ಕೃತ ಕೇವಲ ಭಾಷೆಯಾಗಿರದೇ ಅದು ದೇಶದ ಸಂಸ್ಕೃತಿಯ ಪ್ರತೀಕವಾಗಿದೆ. ಭಾಷೆ ಎಷ್ಟೇ ಶ್ರೀಮಂತ-ಶ್ರೇಷ್ಠವಾಗಿದ್ದರೂ ಆ ಭಾಷೆ ನಿಂತ ನೀರಾಗಿರದೇ ನದಿಯಂತೆ ಸದಾ ಪ್ರವಹಿಸುತ್ತಿರಬೇಕು ಎಂದು ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯದ ಧಾರವಾಡ ವಲಯ ಸಂಯೋಜಕ ಬಿ.ಬಿ. ಆರೇರ ಹೇಳಿದರು.

Advertisement

ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಸೋಮವಾರ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ, ಲಕ್ಷ್ಮೇಶ್ವರದ ತಾಯಿ ಪಾರ್ವತಿ ಮಕ್ಕಳ ಬಳಗ, ಜಗದ್ಗುರು ರೇಣುಕಾಚಾರ್ಯ ಸಂಸ್ಕೃತ ಪಾಠಶಾಲೆ ವತಿಯಿಂದ ಹಮ್ಮಿಕೊಂಡಿದ್ದ `ಸಂಸ್ಕೃತ ಸಪ್ತಾಹ’ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಲಲಿತಕ್ಕ ಕೆರಿಮನಿ ಸಂಗ್ರಹಿಸಿದ ಸಂಸ್ಕೃತ ಭಾಷೆಯ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಂಸ್ಕೃತ ದೇವ ಭಾಷೆಯಾಗಿದ್ದು, ಈ ಭಾಷೆಯಲ್ಲಿ ಭಾರತೀಯ ವಿದ್ವಾಂಸರ ಜ್ಞಾನ ಅಡಕವಾಗಿದೆ. ಪ್ರತಿದಿನ ಸಂಸ್ಕೃತ ಶ್ಲೋಕಗಳನ್ನು ಹೇಳುವವರ ನಾಲಿಗೆಯ ಮೇಲೆ ಸರಸ್ವತಿ ನಟನೆ ಮಾಡುತ್ತಾಳೆ ಎಂದು ತಿಳಿಸಿದ ಅವರು, ಲಕ್ಷ್ಮೇಶ್ವರದ ಸಂಸ್ಕೃತ ಪಾಠ ಶಾಲೆ ವತಿಯಿಂದ ಸಂಸ್ಕೃತದ ಸಾಹಿತ್ಯ ಪಾಠ ಶಾಲೆ ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಮನುಕುಲದ ಉನ್ನತಿ, ಲೋಕಸತ್ಯದ ಮಹಾ ಗ್ರಂಥಗಳೆಲ್ಲ ಸಂಸ್ಕೃತದಲ್ಲಿಯೇ ಇರುವುದು ಭಾಷೆಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕೃತ ಅಭ್ಯಾಸ ಮಾಡಿಸಬೇಕು ಎಂದು ತಿಳಿಸಿದರು.

ಬಳಗದ ಕಾರ್ಯದರ್ಶಿ ಜಯಲಕ್ಷ್ಮೀದೇವಿ ಗಡ್ಡದೇವರಮಠ ಮಾತನಾಡಿದರು. ಸುವರ್ಣಾಬಾಯಿ ಬಹದ್ದೂರದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಾರಕ್ಕ ಮಹಾಂತಶೆಟ್ಟರ, ಜೆ.ಎಂ. ಮೆಳ್ಳಿಗೇರಿ, ಜಯಲಕ್ಷ್ಮೀ ಮಹಾಂತಶೆಟ್ಟರ, ರೋಹಿಣಿಬಾಯಿ ಬಹದ್ದೂರದೇಸಾಯಿ, ರಮೇಶ ನವಲೆ, ಜೆ.ಡಿ. ಲಮಾಣಿ, ಜ್ಯೋತಿ ಅರಳಿಕಟ್ಡಿ, ಕಮಲಾ ಹಿರೇಮಠ, ಸಾವಿತ್ರಮ್ಮ ಹೂವಿನ, ಎಚ್.ಎನ್. ಭಜಂತ್ರಿ, ಸಾಕ್ಷಿ ಮೆಣಸಿನಕಾಯಿ ನಿರ್ವಹಿಸಿದರು.

ಸಾಹಿತಿ ಲಲಿತಕ್ಕ ಕೆರಿಮನಿ ಮಾತನಾಡಿ, ನಮ್ಮ ಬದುಕಿಗೆ ಮಾರ್ಗದರ್ಶನ ಆಗಬಲ್ಲ ಸಂಸ್ಕೃತದ ನೂರಾರು ಶ್ಲೋಕಗಳನ್ನು ಕನ್ನಡೀಕರಿಸಿದ್ದೇನೆ. ಮಕ್ಕಳೂ ಸೇರಿ ಎಲ್ಲರಿಗೂ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಜ್ಞಾನ, ಧರ್ಮಕ್ಕೆ ಸಂಬಂಧಿಸಿದ ಹಾಗೂ ಸಜ್ಜನರ ಮಹತ್ವ ಎಷ್ಟು ಎಂಬುದನ್ನು ಬಿಂಬಿಸುವ ಶ್ಲೋಕಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಎರಡು ಪುಸ್ತಕಗಳನ್ನು ರಚಿಸಿದ್ದೇನೆ. ಪುಸ್ತಕಗಳಲ್ಲಿನ ಶ್ಲೋಕಗಳನ್ನು ಮಕ್ಕಳು ಪ್ರತಿದಿನ ಪಠಣ ಮಾಡಿದರೆ ಅವರಲ್ಲಿ ಜ್ಞಾನದ ಜತೆಗೆ ಸಂಸ್ಕಾರವೂ ಬೆಳೆಯುತ್ತದೆಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here