ರಾಜ್ಯಕ್ಕೆ ವಂಚನೆ ಆಗುವುದು ಬೇಡ : ದಿನೇಶ ಗುಂಡೂರಾವ್

0
Sanyukta Karnataka' Health Festival
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಆರೋಗ್ಯ ಕ್ಷೇತ್ರಕ್ಕೆ ಸಮರ್ಪಕ ಹಾಗೂ ಹೆಚ್ಚಿನ ಅನುದಾನ ನೀಡುವುದರ ಜೊತೆಗೆ ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ಆರೋಗ್ಯ ಯೋಜನೆಗಳನ್ನು ರೂಪಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

Advertisement

`ಸಂಯುಕ್ತ ಕರ್ನಾಟಕ’ ದಿನಪತ್ರಿಕೆ ಏರ್ಪಡಿಸಿರುವ ಮೂರು ದಿನಗಳ `ಆರೋಗ್ಯ ಹಬ್ಬ’ವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಕೇಂದ್ರ ರೂಪಿಸಿರುವ ಮತ್ತು ರೂಪಿಸಲಿರುವ ಆರೋಗ್ಯ ಕಾರ್ಯಕ್ರಮಗಳಲ್ಲಿ ಕರ್ನಾಟಕಕ್ಕೆ ವಂಚನೆ ಆಗುವುದು ಬೇಡ. ರಾಜ್ಯಕ್ಕೆ ಬರಬೇಕಾದ ಅನುದಾನ ಮತ್ತು ಯೋಜನೆಗಳಲ್ಲಿ ವಂಚನೆ ಆಗುವುದು ಬೇಡ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಕ್ಷ ಮತ್ತು ಸರ್ಕಾರ ಎನ್ನುವ ಪ್ರಶ್ನೆ ಎದುರಾಗಕೂಡದು ಎಂದು ಕಳಕಳಿ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ವಿಷಯದಲ್ಲಿ ರಾಜ್ಯವಾರು ಪ್ರತ್ಯೇಕ ನೀತಿ ಇರಬೇಕು. ಪ್ರತಿಯೊಂದು ರಾಜ್ಯದ ಆರೋಗ್ಯ ಸನ್ನಿವೇಶ ವಿಭಿನ್ನವಾಗಿರುತ್ತದೆ. ಒಂದು ರಾಜ್ಯದ ಸ್ಥಿತಿ ಇನ್ನೊಂದರಲ್ಲಿ ಇರುವುದಿಲ್ಲ.

ಆದ್ದರಿಂದ ಕಾರ್ಯಕ್ರಮಗಳನ್ನು ರೂಪಿಸುವಾಗ ಏಕಪ್ರಕಾರದ ನೀತಿಗಳು ಸೂಕ್ತವಲ್ಲ. ಬಿಹಾರ ಮತ್ತಿತರ ರಾಜ್ಯಗಳಿಗೆ ಉಪಯೋಗವಾಗುವ ಕಾರ್ಯಕ್ರಮ ಕರ್ನಾಟಕಕ್ಕೆ ಆಗುವುದಿಲ್ಲ. ಇಲ್ಲಿನ ಸನ್ನಿವೇಶವೇ ಭಿನ್ನವಾಗಿರುತ್ತದೆ. ಹೀಗಾಗಿ ಕೇಂದ್ರದ ಆರೋಗ್ಯ ಕಾರ್ಯಕ್ರಮಗಳು ಆಯಾ ರಾಜ್ಯದ ಪರಿಸ್ಥಿತಿಗೆ ಅನುಗುಣವಾಗಿ ರೂಪಿತವಾಗಬೇಕಿದೆ ಎಂದು ದಿನೇಶ ಗುಂಡೂರಾವ್ ಅಭಿಪ್ರಾಯಪಟ್ಟರು.

ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ ಸ್ವಾಗತಿಸಿದರು. ಧರ್ಮದರ್ಶಿ ಡಾ.ಗುರುರಾಜ ಕರಜಗಿ ಪ್ರಾಸ್ತಾವಿಕ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಸ್ಪೀಕರ್ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಮತ್ತು ಸಂಸದರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಮೇಯರ್ ರಾಮಣ್ಣ ಬಡಿಗೇರ, ಜಿಲ್ಲಾಧಿಕಾರಿ ದಿವ್ಯಾಪ್ರಭು ಜೆ.ಆರ್.ಜೆ., ನೇತ್ರ ತಜ್ಞ ಡಾ. ಎಂ.ಎಂ. ಜೋಶಿ, ಉದ್ಯಮಿಗಳಾದ ಡಾ. ವಿ.ಎಸ್.ವಿ. ಪ್ರಸಾದ್, ಬಸವರಾಜ ಕಮತಗಿ, ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಶಿರಸಿ ನಿಸರ್ಗ ಮನೆಯ ಡಾ.ವೆಂಕಟರಮಣ ಹೆಗಡೆ, ಲೋಕಶಿಕ್ಷಣ ಟ್ರಸ್ಟ್ನ ಧರ್ಮದರ್ಶಿಗಳಾದ ಕೇಶವ ದೇಸಾಯಿ, ಡಾ.ಗುರುರಾಜ ಕರಜಗಿ, ಕಾರ್ಯದರ್ಶಿ ಹರಿಚನ್ನಕೇಶವ, `ಸಂಯುಕ್ತ ಕರ್ನಾಟಕ’ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಹೆಗಡೆ ಮತ್ತಿತರರು.

ರಾಜ್ಯದಲ್ಲಿ ಹೊಸ ತಾಲ್ಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಜಿಲ್ಲಾಸ್ಪತ್ರೆಗಳನ್ನು ಸ್ಥಾಪಿಸಲು ಸರ್ಕಾರ ಹಲವಾರು ಹೆಜ್ಜೆಗಳನ್ನು ಇರಿಸಿದೆ. ಇದಕ್ಕಿಂತ ಮುಖ್ಯವಾಗಿ ಈಗಿರುವ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಮತ್ತು ಔಷಧಿ ಕೊರತೆ ನೀಗಿಸಲು ಆದ್ಯತೆ ನೀಡಲಾಗಿದೆ ಎಂದು ಸಚಿವರು ಹೇಳಿದರು.


Spread the love

LEAVE A REPLY

Please enter your comment!
Please enter your name here