ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ದೇಶದ ಐಕ್ಯತೆ ಹಾಗೂ ಏಕೀಕರಣಕ್ಕೆ ಹೋರಾಟ ಮಾಡಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲರು ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಗದಗ ನಗರದ ವಿಠಲಾರೂಢ ಕಲ್ಯಾಣ ಮಂಟಪದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕೋಶಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಏಕತಾ ಪಾದಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1947ರ ಸ್ವಾತಂತ್ರ್ಯದ ನಂತರ ದೇಶಾದಲ್ಲಿ ಹರಿದು ಹಂಚಿ ಹೋಗಿದ್ದ 500ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಂದೇ ಒಕ್ಕೂಟದ ವ್ಯವಸ್ಥೆಗೆ ತರಲು ಸರ್ದಾರ್ ವಲ್ಲಭಬಾಯಿ ಪಟೇಲರು ಶ್ರಮಿಸಿದರು. ಅವರ ನಿರಂತರ ಶ್ರಮದ ಫಲವಾಗಿ ದೇಶವು ಒಕ್ಕೂಟ ವ್ಯವಸ್ಥೆಯಡಿ ಬರಲು ಸಾಧ್ಯವಾಯಿತು. ದೇಶಾದ್ಯಂತ 3 ಸಾವಿರಕ್ಕೂ ಹೆಚ್ಚು ಜಾತಿಗಳು, 25 ಸಾವಿರಕ್ಕೂ ಹೆಚ್ಚು ಉಪಜಾತಿಗಳಿದ್ದರೂ ಎಲ್ಲರಲ್ಲಿಯೂ ಒಗ್ಗಟ್ಟಿನ ಮನೋಭಾವನೆ ಬೆಳೆಸಬೇಕು, ಅದಕ್ಕೆ ಉತ್ತೇಜನ ಕೊಡಬೇಕು ಎಂಬ ನಿಟ್ಟಿನಲ್ಲಿ ಶ್ರಮಿಸಿದ ವಲ್ಲಭಬಾಯಿ ಪಟೇಲರಿಗೆ ಮಹಾತ್ಮ ಗಾಂಧೀಜಿ ಅವರು ಸರ್ದಾರ್ ಎಂದು ಬಿರುದನ್ನು ನೀಡಿದರು ಎಂದು ಸ್ಮರಿಸಿದರು.
ಯುವಕರಲ್ಲಿ ದೇಶಪ್ರೇಮ, ದೇಶಭಕ್ತಿ ಹೆಚ್ಚಿಸಬೇಕು, ಸ್ವಾವಲಂಬನೆಯ ಮನೋಭಾವನೆಯ ಜೊತೆಗೆ ಸಾಮಾಜಿಕ ಜವಾಬ್ದಾರಿಯ ತಿಳಿವಳಿಕೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭಬಾಯಿ ಪಟೇಲರ 150ನೇ ಜನ್ಮದಿನದ ಅಂಗವಾಗಿ ದೇಶಾದ್ಯಂತ `ಒಂದೇ ಭಾರತ, ಆತ್ಮನಿರ್ಭರ ಭಾರತ’ ಏಕತಾ ನಡಿಗೆಯನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.
ನಗರದ ಮುಳಗುಂದ ನಾಕಾ ಬಳಿಯ ವಿಠಲಾರೂಢ ಕಲ್ಯಾಣ ಮಂಟಪದಿಂದ ಆರಂಭವಾದ ಜಿಲ್ಲಾ ಮಟ್ಟದ ಏಕತಾ ನಡಿಗೆಯು ಮುಳಗುಂದ ನಾಕಾ, ಜೋಡ ಮಾರುತಿ ದೇವಸ್ಥಾನ, ಹತ್ತಿಕಾಳ ಕೂಟ, ಬಸವೇಶ್ವರ ವೃತ್ತ, ಮಹೇಂದ್ರಕರ್ ವೃತ್ತ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದಲ್ಲಿ ಸಮಾರೋಪಗೊಂಡಿತು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಏಕತಾ ನಡಿಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಿವೈಎಸ್ಪಿ ಮುರ್ತುಜಾ ಖಾದ್ರಿ, ಮೈ ಭಾರತ ಕೇಂದ್ರದ ಉಪನಿರ್ದೇಶಕ ಲೋಕೇಶ ಕುಮಾರ, ರಾಷ್ಟ್ರೀಯ ಸೇವಾ ಯೋಜನೆಯ ನೋಡೆಲ್ ಅಧಿಕಾರಿ ವಿ.ಎಚ್. ಕೊಳ್ಳಿ, ಶ್ರೀನಿವಾಸ ಬಡಿಗೇರ, ರಾಜು ಕುರಡಗಿ, ಅಭಿಯಾನದ ಜಿಲ್ಲಾ ಸಂಚಾಲಕ ಆರ್.ಕೆ. ಚವ್ಹಾಣ, ಸಂತೋಷ ಅಕ್ಕಿ, ಲಿಂಗರಾಜ ಪಾಟೀಲ, ಫಕೀರೇಶ ರಟ್ಟಿಹಳ್ಳಿ, ರಮೇಶ ಸಜ್ಜಗಾರ, ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ವಿಜಯಲಕ್ಷ್ಮಿ ಮಾನ್ವಿ, ಸ್ವಾತಿ ಅಕ್ಕಿ ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಸರ್ದಾರ್ ವಲ್ಲಭಬಾಯಿ ಪಟೇಲರು ಇಂಗ್ಲೆಂಡ್ಕ್ಕೆ ಹೋಗಿ ಕಾನೂನು ಪದವಿ ಪಡೆದು, ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟಕ್ಕೆ ಧುಮುಕಿದರು. ರೈತರ ಹೋರಾಟದ ನೇತೃತ್ವ ವಹಿಸಿ ಯಶಸ್ಸು ಕಂಡ ವಲ್ಲಭಾಯಿ ಪಟೇಲರು ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧಿ ಹೊಂದಿದರು ಎಂದು ಹೇಳಿದರು.


