ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಮಹಿಳೆ ಸೀರೆ ಕದ್ದಿದ್ದಾಳೆಂದು ಆರೋಪಿಸಿ ನಡುರಸ್ತೆಯಲ್ಲೇ ಅಂಗಡಿ ಮಾಲೀಕ ದೌರ್ಜನ್ಯ ಎಸಗಿರುವ ಅಮಾನುಷ ಘಟನೆ ಜರುಗಿದೆ.
ಅವೆನ್ಯೂ ರಸ್ತೆಯ ಮಾಯಾ ಸಿಲ್ಕ್ ಸ್ಯಾರೀಸ್ ಅಂಗಡಿ ಮಾಲೀಕ ಬಾಬುಲಾಲ್, ಹಾಡಹಗಲೇ ನಡುರಸ್ತೆಯಲ್ಲಿ ಸಾರ್ವಜನಿಕವಾಗಿ ಬೂಟುಗಾಲಿನಿಂದ ಒದ್ದು ಅಮಾನವೀಯ ನಡೆದುಕೊಂಡಿದ್ದಾನೆ. ಮಾಲೀಕ ಮಾತ್ರವಲ್ಲದೇ ಅಂಗಡಿ ಸಿಬ್ಬಂದಿ ಸಹ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನೋವಿನಿಂದ ಮಹಿಳೆ ಕಿರುಚಾಡಿ ಅಂಗಲಾಚಿದ್ರು ಸಹ ಬಿಟ್ಟಿಲ್ಲ. ಮಹಿಳೆ ಮೇಲೆ ಹಲ್ಲೆ ಮಾಡಿದ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಅಂಗಡಿ ಮಾಲೀಕನ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸದ್ಯ ಮಹಿಳೆ ಪರವಾಗಿ ಕನ್ನಡಪರ ಹೋರಾಟಗಾರರು ನಿಂತಿದ್ದಾರೆ.
ಇನ್ನು ಮಹಿಳೆಯ ರಕ್ಷಣೆಗೆ ನಿಲ್ಲಬೇಕಾಗಿದ್ದ ಕೆ.ಆರ್. ಮಾರ್ಕೆಟ್ ಪೊಲೀಸರೇ ನಿರ್ಲಕ್ಷ್ಯ ತೋರಿದ್ದಾರೆ. ಮಹಿಳೆಯ ದೂರು ದಾಖಲಿಸಿಕೊಳ್ಳುವ ಬದಲಾಗಿ ಬಟ್ಟೆ ಅಂಗಡಿಯ ಮಾಲೀಕನ ಪರವಾಗಿ ನಿಂತಿದ್ದು, ಕಳ್ಳತನ ಕೇಸ್ ಹಾಕಿ ಮಹಿಳೆಯನ್ನ ಜೈಲಿಗಟ್ಟಿದ್ದಾರೆ. ಪೂರ್ವಪರ ಪರಿಶೀಲಿಸದೆ ಮಹಿಳೆಯ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆದ್ರೆ,ಓರ್ವ ಮಹಿಳೆಯ ಮೇಲೆ ನಡುರಸ್ತೆಯಲ್ಲಿ ಹಲ್ಲೆ ನಡೆಸಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಆಕ್ರೋಶ ವ್ಯಕ್ತವಾಗಿದ್ದು, ಮಹಿಳೆ ಪರವಾಗಿ ಕನ್ನಡ ಪರ ಸಂಘಟನೆಗಳು ನಿಂತಿವೆ.