ಖ್ಯಾತ ನಟಿ ಬಿ. ಸರೋಜಾದೇವಿ ಜುಲೈ 14ರಂದು ಮುಂಜಾನೆ ನಿಧನರಾಗಿದ್ದಾರೆ. ಹಲವು ವರ್ಷಗಳ ಕಾಲ ಚಿತ್ರರಂಗವನ್ನ ಆಳಿದ ನಟಿಯ ನಿಧನಕ್ಕೆ ಸಿನಿಮಾ ನಟ, ನಟಿಯರು, ರಾಜಕೀಯ ಹಣ್ಯರು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ. ಇಂದು ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಾವಿನ ನಂತರವೂ ಸರೋಜಾದೇವಿ ಅವರು ಸಾರ್ಥಕತೆ ಮೆರೆದಿದ್ದು, ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿದ್ದಾರೆ. ನಾರಾಯಣ ನೇತ್ರಾಲಯಕ್ಕೆ ಕಣ್ಣುಗಳ ದಾನ ಮಾಡಲಾಗಿದ್ದು, ವೈದ್ಯರು ಆಗಮಿಸಿ ಕಣ್ಣುಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಡಾ.ರಾಜ್ ಕುಮಾರ್ ಹಾಗೂ ಸರೋಜಾ ದೇವಿ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರೆ. ಅಂತೆಯೇ ಕೊನೆಯುವರೆಗೂ ರಾಜ್ ಕುಟುಂಬದ ಜೊತೆ ಸರೋಜಾ ದೇವಿ ಉತ್ತಮ ಬಾಂದವ್ಯ ಹೊಂದಿದ್ದರು. ಇದೀಗ ಅಂತ ಸಾವಿನ ಬಳಿಕವು ನಟಿ ಅಣ್ಣವ್ರು ಹಾದಿಯಲ್ಲೇ ನಡೆದು ಜೀವನದ ಸಾರ್ಥಕತೆ ಮೆರೆದಿದ್ದಾರೆ.
ನೇತ್ರದಾನ ಮಾಡುವಂತೆ ವರನಟ ಡಾ.ರಾಜ್‌ಕುಮಾರ್ ಕೂಡ ಕರೆ ಕೊಟ್ಟಿದ್ದರು. ತಮ್ಮ ಕಣ್ಣುಗಳನ್ನು ಡಾ.ರಾಜ್‌ಕುಮಾರ್ ದಾನ ಮಾಡಿದ್ದರು. ಡಾ.ರಾಜ್‌ಕುಮಾರ್ ಹಾದಿಯನ್ನು ಅನುಸರಿಸಿ ಅನೇಕರು ನೇತ್ರದಾನ ಮಾಡಿದ್ದಾರೆ. ಇದೀಗ ಹಿರಿಯ ನಟಿ ಸರೋಜಾದೇವಿ ಅವರ ಕಣ್ಣುಗಳನ್ನೂ ದಾನ ಮಾಡಲಾಗಿದೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸರೋಜಾದೇವಿ ತಮ್ಮ 87 ವರ್ಷಕ್ಕೆ ವಿಧಿವಶರಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಅಂದಿನ ಕಾಲದಲ್ಲೇ ಮೊದಲ ಲೇಡಿ ಸೂಪರ್‌ಸ್ಟಾರ್ ಆಗಿದ್ದವರು.