‘ಕೆಡಿ’ ಚಿತ್ರದ ‘ಸರ್ಸೆ ಸೆರಗ’ ಹಾಡು ವಿವಾದ ಈಗ ರಾಷ್ಟ್ರ ಮಟ್ಟಕ್ಕೆ ತಲುಪಿದ್ದು, ರಾಷ್ಟ್ರೀಯ ಮಹಿಳಾ ಆಯೋಗ ಸಿನಿಮಾ ತಂಡದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಹಾಡಿನ ಸಾಹಿತ್ಯ ಹಾಗೂ ದೃಶ್ಯಗಳು ಅಸಭ್ಯ ಮತ್ತು ಸಮಾಜಕ್ಕೆ ಹಾನಿಕಾರಕ ಎಂದು ಆರೋಪಿಸಿ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದೆ.
ಹಿಂದಿ ಆವೃತ್ತಿಯ ಹಾಡು ‘ಸರ್ಕೆ ಚುನರಿಯಾ ತೇರಿ ಸರ್ಕೆ’ ಹೆಚ್ಚು ವಿವಾದಕ್ಕೀಡಾಗಿದ್ದು, ಸಿಬಿಎಫ್ಸಿ ಮತ್ತು ಸೈಬರ್ ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ. ಈ ನಡುವೆ ಲೋಕಸಭೆಯಲ್ಲೂ ಚರ್ಚೆ ನಡೆದಿರುವುದು ಪ್ರಕರಣದ ಗಂಭೀರತೆಯನ್ನು ಸೂಚಿಸುತ್ತದೆ.
ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಸಾರ್ವಜನಿಕ ನೈತಿಕತೆಗೆ ಧಕ್ಕೆ ಹಾಗೂ ಆನ್‌ಲೈನ್‌ನಲ್ಲಿ ಆಕ್ಷೇಪಾರ್ಹ ವಿಷಯ ಪ್ರಸಾರ ಆರೋಪಗಳ ಮೇಲೆ ವಿಚಾರಣೆ ನಡೆಸಲು ನಿರ್ದೇಶಕ ಪ್ರೇಮ್, ನಟಿ ನೋರಾ ಫತೇಹಿ, ನಟ ಸಂಜಯ್ ದತ್, ಗೀತರಚನೆಕಾರ ರಕೀಬ್ ಆಲಂ ಹಾಗೂ ನಿರ್ಮಾಪಕ ವೆಂಕಟ್ ಕೆ ನಾರಾಯಣ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಮಾರ್ಚ್ 24 ರಂದು ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದ್ದು, ಗೈರಾದರೆ ಕಠಿಣ ಕ್ರಮ ಎದುರಾಗಲಿದೆ. ಇದೇ ವೇಳೆ ಪ್ರೇಮ್ ತಮ್ಮ ಹೇಳಿಕೆಯಲ್ಲಿ, ಹಾಡು ಕುರಿತು ಉಂಟಾದ ವಿವಾದಕ್ಕೆ ಕ್ಷಮೆ ಕೇಳಿ, ಸಾಹಿತ್ಯವನ್ನು ಮರುಸಂಸ್ಕರಿಸಿ ಮತ್ತೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.



