ಬೆಂಗಳೂರು:- ಸಾವಿರಾರು ಕೋಟಿ ರೂ. ಮೌಲ್ಯದ 10 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ಸತ್ವ ಗ್ರೂಪ್‌ನ ಅಶ್ವಿನ್ ಸಂಚೆಟಿಯನ್ನು ಅವಲಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಡಾಪುರ ಗ್ರಾಮದ ಸರ್ವೇ ನಂ. 20, 21, 44/1ರಲ್ಲಿ ಇರುವ ಜಮೀನನ್ನು ಕಬಳಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೂಲತಃ ಈ ಜಮೀನು ಕೃಷ್ಣನ್–ರಾಧ ದಂಪತಿಗೆ ಸೇರಿದ್ದು, ಪತಿ ಕೃಷ್ಣನ್ 1986ರಲ್ಲಿ ಮೃತರಾದ ಬಳಿಕ ರಾಧ ತಮಿಳುನಾಡಿಗೆ ತೆರಳಿದ್ದರು. 2022ರಿಂದ ಮೂವರು ಗ್ಯಾಂಗ್‌ಗಳು ನಕಲಿ ದಾಖಲೆ ಸೃಷ್ಟಿಸಿ ಕೋರ್ಟ್ ಮುಖಾಂತರ ಖಾತೆ ಮಾಡಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮೂಲ ಮಾಲೀಕರ ಪರವಾಗಿ ವ್ಯಕ್ತಿಯೊಬ್ಬರು ದೂರು ನೀಡಿದ ಬಳಿಕ ರಾಧ ರವರು ರಿಜಿನಲ್ ಕಮಿಷನರ್ ಕಚೇರಿಗೆ ಅಧಿಕೃತ ದೂರು ಸಲ್ಲಿಸಿದ್ದರು.
ದಾಖಲೆ ಪರಿಶೀಲನೆಯ ನಂತರ ಜಮೀನು ಮತ್ತೆ ರಾಧರವರ ಹೆಸರಿಗೆ ಖಾತೆ ಮಾಡಲು ಅಧಿಕಾರಿಗಳು ಸೂಚಿಸಿದ್ದಾರೆ. ಸುಮಾರು ಸಾವಿರಾರು ಕೋಟಿ ಮೌಲ್ಯದ ಈ ಜಮೀನು ಕಬಳಿಕೆ ಪ್ರಕರಣದಲ್ಲಿ ಒಟ್ಟು 15 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎ-1 ಆರೋಪಿ ಅಶ್ವಿನ್ ಸಂಚೆಟಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.


