ಗದಗ: ದಸರಾ ಹಬ್ಬಕ್ಕೆ ರಜೆ ನೀಡದ ಶಾಲೆಗಳ ಮುಂದೆ ಶ್ರೀ ರಾಮ ಸೇನೆ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದರು. ಗದಗನ ಬೆಟಗೇರಿಯ ಲೊಯೊಲಾ ಕಾನ್ವೆಂಟ್ ಶಾಲೆಯ ಬಳಿ ಆಗಮಿಸಿದ ಕಾರ್ಯಕರ್ತರು, ದಸರಾ ಹಬ್ಬಕ್ಕೆ ಶಾಲಾ ಆಡಳಿತ ಮಂಡಳಿ ರಜೆ ಘೋಷಿಸದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಶಾಲಾ ಆಡಳಿತ ಮಂಡಳಿ ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಸ್ಥಳಕ್ಕೆ ಬಂದ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಶೆಟ್ಟಪ್ಪನ್ನವರ್ ಅವರನ್ನು ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ದಸರಾ ಹಬ್ಬಕ್ಕೆ ರಜೆ ಕೊಡೋದಿಲ್ಲ, ಆದರೆ ಕ್ರಿಸ್‌ಮಸ್ ಹಬ್ಬಕ್ಕೆ ಮಾತ್ರ ರಜೆ ಕೊಡ್ತಾರೆ, ಗದಗ-ಬೆಟಗೇರಿ ಅವಳಿ ನಗರದ ಹಲವು ಕಾನ್ವೆಂಟ್ ಸ್ಕೂಲ್ ಗಳು ರಜೆ ನೀಡ್ತಾಯಿಲ್ಲ, ಸರ್ಕಾರವೇ ದಸರಾ ಹಬ್ಬಕ್ಕೆ ರಜೆ ನೀಡುತ್ತೇ, ಈ ಕಾನ್ವೆಂಟ್ ಶಾಲೆ ನೀಡೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೆ ಶಿಕ್ಷಣ ಇಲಾಖೆಯ ಮಧ್ಯಸ್ಥಿಕೆಯಿಂದ ಶಾಲೆಗಳಿಗೆ ದಸರಾ ಹಬ್ಬದ ರಜೆ ಘೋಷಿಸಲಾಯಿತು. ಇದರಿಂದಾಗಿ ಶ್ರೀರಾಮ ಸೇನೆಯ ಕಾರ್ಯಕರ್ತರು ಪ್ರತಿಭಟನೆ ಹಿಂದಕ್ಕೆ ಪಡೆದರು. ಈ ಸಂದರ್ಭದಲ್ಲಿ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ಮಾರುತಿ ಜೋಗದಂಡಕರ್ ಹಾಗೂ ಸಿಬ್ಬಂದಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದರು.