ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಹುಲ್ಲೂರು ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕಾ ಮಟ್ಟದ ವಿಜ್ಞಾನ ಗೋಷ್ಠಿ ಹಾಗೂ ವಿಜ್ಞಾನ ನಾಟಕಗಳ ಸ್ಪರ್ಧೆ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ ಉದ್ಘಾಟಿಸಿ ಮಾತನಾಡಿ, ಸುಜ್ಞಾನದ ಅಡಿಯಲ್ಲಿ ವಿಜ್ಞಾನದ ಕಲಿಕೆ ಆಗಬೇಕು. ಅಂತಹ ವಿಜ್ಞಾನದಿಂದ ಪರಿಪೂರ್ಣ ವ್ಯಕ್ತಿತ್ವ, ಸುಭದ್ರ ಸಮಾಜ, ರಾಜ್ಯ, ರಾಷ್ಟ್ರ ನಿರ್ಮಾಣವಾಗುತ್ತದೆ. ಅಂತಹ ವಿಜ್ಞಾನದ ಕಲಿಕೆ ವಿಜ್ಞಾನದ ಇಂತಹ ಕಾರ್ಯಕ್ರಮಗಳ ಮುಖಾಂತರ ಸಾಧ್ಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕ ಜಿ.ಡಿ. ದಾಸರ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿಜ್ಞಾನದಂತಹ ವಿಷಯಗಳಲ್ಲಿ ಇಂದು ಉತ್ತಮ ಸಾಧನೆ ಮಾಡುತ್ತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಇಂದು ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ. ಅಂತಹ ಜ್ಞಾನಗಳ ಪರಿಚಯ ಪ್ರೌಢಶಾಲಾ ಹಂತದಲ್ಲಿಯೇ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಕೆ.ವೈ. ಮೇಲಿನಮನಿ ಮಾತನಾಡಿ, ಸಮುದಾಯದ ಸಮರ್ಥ ಸಹಭಾಗಿತ್ವವು ಉತ್ತಮ ಶಾಲೆ, ಅತ್ಯುತ್ತಮ ಶೈಕ್ಷಣಿಕ ಪ್ರಗತಿಗೆ ಮುಖ್ಯ ಕಾರಣವಾಗಬಹುದು ಎಂಬುದಕ್ಕೆ ಹುಲ್ಲೂರು ಗ್ರಾಮ ಉತ್ತಮ ಉದಾಹರಣೆಯಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ನೋಡಲ್ ಬಿ.ಆರ್.ಪಿ ಈಶ್ವರ ಮೆಡ್ಲೇರಿ, ವೈಜ್ಞಾನಿಕ ಮನೋಭಾವವನ್ನು ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ ವಿಜ್ಞಾನ ವಿಚಾರಗೋಷ್ಠಿ ಹಾಗೂ ವಿಜ್ಞಾನ ನಾಟಕ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ವರ್ಷ ತಾಲೂಕಿನಿಂದ ಆಯ್ಕೆಯಾಗಿರುವ ತಂಡಗಳು ರಾಜ್ಯ, ರಾಷ್ಟ್ರ ಹಾಗೂ ಜೋನಲ್ ಹಂತದವರೆಗೆ ಹೋಗಿ ತಾಲೂಕಿಗೆ ಕೀರ್ತಿ ತಂದಿವೆ ಎಂದರು.
ಹುಲ್ಲೂರು ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್ವರಗೌಡ ಪಾಟೀಲ, ಮಾಜಿ ಉಪಾಧ್ಯಕ್ಷ ಮಾಬುಲಿ ಗಾಡಗೋಳಿ ಮಾತನಾಡಿದರು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾಧ್ಯಕ್ಷ, ಉಪನ್ಯಾಸಕ ರಮೇಶ ರಿತ್ತಿ, ಯಲ್ಲಪ್ಪ ನರಸೋಜಿ, ಶೇಖಣ್ಣ ಸಾಸಲವಾಡ, ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕ್ರಣ್ಣ ಮಾಗಡಿ, ಅಶೋಕ ಹಾವೇರಿ, ಶಂಕ್ರಣ್ಣ ಮೂಕಿ, ಆನಂದ ಮುಳಗುಂದ, ಶಿಕ್ಷಣ ಸಂಯೋಜಕ ಉಮೇಶ ಹುಚ್ಚಯ್ಯನಮಠ, ಮುಖ್ಯೋಪಾಧ್ಯಾಯ ಹರೀಶ ಎಸ್, ಈರಣ್ಣ ಗಾಣಿಗೇರ, ಶೇಖರ ಚಿಕ್ಕಣ್ಣವರ, ನವೀನ ಅಂಗಡಿ ಉಪಸ್ಥಿತರಿದ್ದರು.
ಸಿ.ಆರ್.ಪಿ ಗಿರೀಶ ನೇಕಾರ ಸ್ವಾಗತಿಸಿದರು. ಶಿಕ್ಷಕ ಸಿದ್ದಲಿಂಗೇಶ ಹಲಸೂರ ನಿರೂಪಿಸಿದರು. ಬಿ.ಎಸ್. ಕೊಪ್ಪದ ವಂದಿಸಿದರು.
ಸ್ಪರ್ಧೆಗಳ ಫಲಿತಾಂಶ
ವಿಜ್ಞಾನ ಗೋಷ್ಠಿ ಸ್ಪರ್ಧೆಯಲ್ಲಿ ಶ್ರಾವ್ಯ ಹಿರೇಮಠ, ವಿದ್ಯಾಪೀಠ ಪಾಠಶಾಲಾ ಲಕ್ಷ್ಮೇಶ್ವರ (ಪ್ರಥಮ), ರೇಣುಕಾ ಮುಶಪ್ಪನವರ, ಸಿಸಿಎನ್ ಸರ್ಕಾರಿ ಪ್ರೌಢಶಾಲೆ ಶಿರಹಟ್ಟಿ (ದ್ವಿತೀಯ), ವೀಣಾ ವಡ್ಡಟ್ಟಿ, ಕೆಪಿಎಸ್ ಪ್ರೌಢಶಾಲೆ ಬೆಳ್ಳಟ್ಟಿ (ತೃತೀಯ) ಸ್ಥಾನ ಪಡೆದುಕೊಂಡರು.
ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಿಯಾಂಕ ಗುಡಗುಂಟಿ ಹಾಗೂ ಸಂಗಡಿಗರು, ಲಿಟಲ್ ಹಾರ್ಟ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಲಕ್ಷ್ಮೇಶ್ವರ (ಪ್ರಥಮ), ರೀತು ಭರಮರಡ್ಡಿ ಸಂಗಡಿಗರು, ಕೆಪಿಎಸ್ ಬೆಳ್ಳಟ್ಟಿ (ದ್ವಿತೀಯ), ಸಿಂಚನಾ ಸಂಗಡಿಗರು, ಸಿಸಿಎನ್ ಸರ್ಕಾರಿ ಪ್ರೌಢಶಾಲೆ ಶಿರಹಟ್ಟಿ (ತೃತೀಯ) ಸ್ಥಾನ ಪಡೆದುಕೊಂಡರು.