HomeGadag Newsಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿರಲಿ : ಭರತ್ ಎಸ್

ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿರಲಿ : ಭರತ್ ಎಸ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಪ.ಜಾ/ಪ.ಪಂ. ಉಪಹಂಚಿಕೆ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಇರಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ನಿಗದಿತ ಕಾಲಾವಧಿಯಲ್ಲಿಯೇ ದೊರಕುವಂತಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ.ಜಾ/ಪ.ಪಂ. ಉಪಹಂಚಿಕೆ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳ ಆಯ್ಕೆ ಮಾಡುವಾಗ ಪಾರದರ್ಶಕತೆಯಿರಬೇಕು. ತಾಲೂಕು ಮಟ್ಟದಲ್ಲಿ ಎಸ್‌ಸಿಪಿ/ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆಯನ್ನು ನಿಯಮಿತವಾಗಿ ಜರುಗಿಸಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ವಿಳಂಬವಾಗದೇ ಶೀಘ್ರಗತಿಯಲ್ಲಿ ತಲುಪುವಂತಾಗಬೇಕು. ಯಾವುದೇ ಕಾರಣಕ್ಕೂ ಬಿಡುಗಡೆಯಾದ ಅನುದಾನ ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಬೇಕು. ಸದರಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಹಾಗೂ ಇಲಾಖಾವಾರು ಸಾಧಿಸಿದ ಪ್ರಗತಿ ವಿವರವನ್ನು ಇಲಾಖೆ ಅಂತರ್ಜಾಲದಲ್ಲಿ ತಪ್ಪದೇ ಅಪ್‌ಡೇಟ್ ಮಾಡಬೇಕು ಎಂದು ಜಿ.ಪಂ ಸಿ.ಇ.ಒ ಭರತ್ ಎಸ್ ನಿರ್ದೇಶನ ನೀಡಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು, ನಗರಾಭಿವೃದ್ಧಿ ಕೋಶ, ತೋಟಗಾರಿಕೆ, ಹೆಸ್ಕಾಂ, ಕೌಶಲ್ಯಾಭಿವೃದ್ಧಿ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಆರ್ಥಿಕ ಮತ್ತು ಭೌತಿಕ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವನಗೌಡ ಕೊಟ್ಟೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟಿಮನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಮಾತನಾಡಿ, 2024-25ನೇ ಸಾಲಿನ ಪರಿಶಿಷ್ಟ ಜಾತಿ ಉಪ ಹಂಚಿಕೆ (ಎಸ್‌ಸಿಎಸ್‌ಪಿ) ಯೋಜನೆಯಡಿ ಆಗಸ್ಟ್ 2024ರ ಅಂತ್ಯದವರೆಗೆ ವಿವಿಧ ಇಲಾಖೆಗಳಡಿ ಒಟ್ಟಾರೆ 4453.89 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು, ಆ ಪೈಕಿ 2898.34 ಲಕ್ಷ ರೂ.ಖರ್ಚಾಗಿದೆ. 24488 ಫಲಾನುಭವಿಗಳು ಯೋಜನೆಯ ಸೌಲಭ್ಯ ಪಡೆದಿದ್ದು, ಶೇ.65ರಷ್ಟು ಪ್ರಗತಿಯಾಗಿದೆ. ಪರಿಶಿಷ್ಟ ಪಂಗಡ ಉಪಹಂಚಿಕೆ (ಟಿಎಸ್‌ಪಿ) ಯೋಜನೆಯಡಿ ವಿವಿಧ ಇಲಾಖೆಗಳಡಿ 1133.54 ಲಕ್ಷ ರೂ.ಬಿಡುಗಡೆಯಾಗಿದ್ದು, ಆ ಪೈಕಿ 758.50 ಲಕ್ಷ ರೂ. ಖರ್ಚಾಗಿದೆ. 2152 ಫಲಾನುಭವಿಗಳು ಯೋಜನೆಯ ಸೌಲಭ್ಯ ಪಡೆದಿದ್ದು, ಶೇ. 67ರಷ್ಟು ಪ್ರಗತಿಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!