ವಿಜಯಸಾಕ್ಷಿ ಸುದ್ದಿ, ಗದಗ : ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಅನ್ನದಾನೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಸೆ. 3ರಿಂದ 12ರವರೆಗೆ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವನ್ನು ಶೃದ್ಧಾಭಕ್ತಿಯಿಂದ ಜರುಗಿಲು ಸರ್ವ ಭಕ್ತಾಧಿಗಳು ಮುಂದಾಗಬೇಕೆಂದು ಸಿದ್ಧರಬೆಟ್ಟ-ಅಬ್ಬಿಗೇರಿಯ ಪೂಜ್ಯ ಷ.ಬ್ರ.ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ಶುಕ್ರವಾರ ಗದುಗಿನ ಜ.ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಜ.ಪಂಚಾಚಾರ್ಯ ಸೇವಾ ಸಂಘ, ಜ.ಪಂಚಾಚಾರ್ಯ ಮಾಂಗಲ್ಯ ಮಂದಿರ, ಜ.ಪಂಚಾಚಾರ್ಯ ಜ್ಞಾನಾಮೃತ ಟ್ರಸ್ಟ ಹಾಗೂ ಜ.ಪಂಚಪೀಠಾಭಿಮಾನಿಗಳು, ಸರ್ವ ಭಕ್ತವೃಂದದವರು ಏರ್ಪಡಿಸಿದ್ದ ರಂಭಾಪುರಿ ಜಗದ್ಗುರುಗಳವರ ದಸರಾ ಧರ್ಮ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮವು ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಶೃದ್ಧಾ-ಭಕ್ತಿಯನ್ನು ಹೊಂದಿರುವ ಜಾಗೃತ ತಾಣ. ಅಬ್ಬಿಗೇರಿ ಹಿರೇಮಠದ ಸಂಸ್ಕೃತ ಪಾಠಶಾಲೆಯು ನೂರು ವರ್ಷವನ್ನು ಪೂರೈಸಿ ಶತಮಾನೋತ್ಸವ ಕಂಡ ಶಾಲೆ. ಈ ಹಿಂದೆ ರಂಭಾಪುರಿ ಜಗದ್ಗುರುಗಳು ಇದೇ ಸಂಸ್ಕೃತ ಪಾಠ ಶಾಲೆಯಲ್ಲಿ ಅಧ್ಯಯನ ಮಾಡಿರುವದು ಇತಿಹಾಸ ಹೀಗಾಗಿ ರಂಭಾಪುರಿ ಪೀಠಕ್ಕೂ ಅಬ್ಬಿಗೇರಿಗೂ ಅವಿನಾಭಾವ ಸಂಬಂಧವಿದೆ ಎಂದರು.
ನರೇಗಲ್ಲ-ಸವದತ್ತಿ ಹಿರೇಮಠ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಅಡ್ನೂರಿನ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು, ಬನ್ನಿಕೊಪ್ಪ-ಮೈಸೂರಿನ ಜಪದಕಟ್ಟಿಮಠದ ಪೂಜ್ಯ ಡಾ.ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ತುಪ್ಪದ ಕುರಹಟ್ಟಿಯ ಭೂಸನೂರ ಸಂಸ್ಥಾನಮಠದ ಪೂಜ್ಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ನರಗುಂದ ಪಂಚಗ್ರಹ ಗುಡ್ಡದ ಹಿರೇಮಠದ ಪೂಜ್ಯ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಹಿರೇವಡ್ಡಟ್ಟಿಯ ಹಿರೇಮಠದ ವೀರೇಶ್ವರ ಶಿವಾಚಾರ್ಯ ಸ್ವಾಮಿಗಳು, ಸೊರಟೂರಿನ ಪೂಜ್ಯ ಫಕ್ಕೀರೇಶ್ವರ ಸ್ವಾಮಿಗಳು ಮಾತನಾಡಿದರು.
ಸಭೆಯಲ್ಲಿ ದಸರಾ ಮಹೋತ್ಸವ ಕುರಿತು ಮಾಹಿತಿಯುಳ್ಳ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅ.ಭಾ.ವೀ.ಮಹಾಸಭಾದ ಗದಗ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ಅವರನ್ನು ಮಠಾಧೀಶರು ಸನ್ಮಾನಿಸಿ ಗೌರವಿಸಿದರು.
ವೇದಿಕೆಯ ಮೇಲೆ ಜ.ಪಂಚಾಚಾರ್ಯ ಮಾಂಗಲ್ಯ ಮಂದಿರದ ಕಾರ್ಯಾಧ್ಯಕ್ಷ ಅಜ್ಜಣ್ಣ ಮಲ್ಲಾಡದ, ಕಾರ್ಯದರ್ಶಿ ಚಂದ್ರು ಬಾಳಿಹಳ್ಳಿಮಠ, ಕೋಶಾಧ್ಯಕ್ಷ ರಾಜಣ್ಣ ಮಲ್ಲಾಡದ, ಜ.ಪಂಚಾಚಾರ್ಯ ಜ್ಞಾನಾಮೃತ ಟ್ರಸ್ಟನ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಶಿಗ್ಲಿ, ಕಾರ್ಯದರ್ಶಿ ಶಿವಾನಂದಯ್ಯ ಹಿರೇಮಠ, ಅ.ಭಾ.ವೀ.ಮಹಾಸಭಾದ ಗದಗ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಎಂ.ಎಸ್. ಚಿನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರು ಬಾಳಿಹಳ್ಳಿಮಠ ನಿರೂಪಿಸಿ ವಂದಿಸಿದರು. ಸಭೆಯಲ್ಲಿ ಜ.ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಬೇಲೇರಿ, ವೀರೇಶ ಕೂಗು, ಭರಮಪ್ಪ ಹನಮನಾಳ ಶಿಕ್ಷಕ ಕಟಗಿ, ಅಬ್ಬಿಗೇರಿ ಮತ್ತು ಸುತ್ತಲಿನ ಗ್ರಾಮಸ್ಥರು ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡು ಸಲಹೆ-ಸೂಚನೆ ನೀಡಿದರು.
ಅಬ್ಬಿಗೇರಿಯ ಹಿರೇಮಠದ ಲಿಂಗೈಕ್ಯ ಷ.ಬ್ರ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವನ್ನು ಅಬ್ಬಿಗೇರಿಯಲ್ಲಿ ಜರುಗಿಸಬೇಕೆಂದು ಅಂದುಕೊಂಡಿದ್ದರು. ಅವರ ಸಂಕಲ್ಪ ಇದೀಗ ಸಾಕಾರಗೊಳ್ಳುತ್ತಿದೆ. ಅಬ್ಬಿಗೇರಿ, ರೋಣ, ಗಜೇಂದ್ರಗಡ ಸೇರಿದಂತೆ ಗದಗ ಜಿಲ್ಲೆಯ ಸಮಸ್ತ ಭಕ್ತಾಧಿಗಳು ಈ ದಸರಾ ಮಹೋತ್ಸವವನ್ನು ಅಬ್ಬಿಗೇರಿಯಲ್ಲಿ ಜರುಗಿಸಲು ಉತ್ಸುಕರಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ನಾವೆಲ್ಲರೂ ಒಗ್ಗೂಡಿಕೊಂಡು ಯಶಸ್ವಿಗೊಳಿಸೋಣ ಎಂದು ಶ್ರೀಗಳು ನುಡಿದರು.
Advertisement