ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೊಮ್ಮೆ ಭದ್ರತಾ ಲೋಪದ ಆರೋಪ ಕೇಳಿಬಂದಿದೆ.
ಜೈಲಿನ ಆವರಣದಲ್ಲಿ ಅಧಿಕಾರಿಗಳು ನಡೆಸಿದ ಹಠಾತ್ ತಪಾಸಣೆ ವೇಳೆ ಮೊಬೈಲ್ ಫೋನ್, ಮೂರು ಸಿಮ್ ಕಾರ್ಡ್‌ಗಳು ಹಾಗೂ 8,500 ರೂಪಾಯಿ ನಗದು ಪತ್ತೆಯಾಗಿದೆ.
ಜೈಲಿನ ಸೂಪರಿಂಟೆಂಡೆಂಟ್ ಬಿ.ಎಂ. ಕೊಟ್ರೇಶ್ ನೇತೃತ್ವದಲ್ಲಿ ದಿಢೀರ್ ತಪಾಸಣೆ ನಡೆಸಲಾಯಿತು. ಈ ವೇಳೆ ಟವರ್-2ರ ಸಿ-ಬ್ಯಾರಕ್‌ನ ಕೊಠಡಿ ಸಂಖ್ಯೆ 4ರಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಮಲತೇಶ ಎಂಬ ಕೈದಿಯ ಬ್ಯಾಗ್‌ನಲ್ಲಿ ಕೀಪ್ಯಾಡ್ ಮೊಬೈಲ್ ಪತ್ತೆಯಾಗಿದೆ.
ಇನ್ನು ಕೊಠಡಿ ಸಂಖ್ಯೆ 5ರಲ್ಲಿದ್ದ ಮೊಹಮ್ಮದ್ ನವಾಜ್ ಎಂಬ ಕೈದಿಯ ಟೋಪಿಯೊಳಗೆ ರಹಸ್ಯವಾಗಿ ಇರಿಸಲಾಗಿದ್ದ ಮೂರು ಸಿಮ್ ಕಾರ್ಡ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದರ ಜೊತೆಗೆ ಜೈಲಿನ ಅಡುಗೆ ಮನೆಯ ಶೌಚಾಲಯದಲ್ಲಿ ಇರಿಸಲಾಗಿದ್ದ ಬ್ಯಾಗ್‌ವೊಂದರಲ್ಲಿ 8,500 ರೂಪಾಯಿ ನಗದು ಪತ್ತೆಯಾಗಿದೆ.
ಜೈಲಿನೊಳಗೆ ನಿಷೇಧಿತ ವಸ್ತುಗಳು ಹಾಗೂ ಹಣ ಪ್ರವೇಶಿಸಲು ಸಹಕರಿಸಿದ ಸಿಬ್ಬಂದಿ ಮತ್ತು ಅವುಗಳನ್ನು ಬಳಸಿದ ಕೈದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಇತ್ತೀಚೆಗಷ್ಟೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಜೈಲು ಸೆಲ್‌ನಲ್ಲೂ ಸ್ಮಾರ್ಟ್‌ಫೋನ್ ಪತ್ತೆಯಾಗಿತ್ತು. ಇದೀಗ ಮತ್ತೆ ಮೊಬೈಲ್, ಸಿಮ್ ಕಾರ್ಡ್‌ಗಳು ಹಾಗೂ ನಗದು ಪತ್ತೆಯಾಗಿರುವುದು ಜೈಲಿನ ಭದ್ರತಾ ವ್ಯವಸ್ಥೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.



