ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪದ ಘಟನೆ ಬೆಳಕಿಗೆ ಬಂದಿದೆ. ವಿಮಾನ ನಿಲ್ದಾಣದ ಟರ್ಮಿನಲ್–2ರ ಹೊಸ ರನ್‌ವೇಯಲ್ಲಿ ಎರಡು ಬೀದಿ ನಾಯಿಗಳು ಓಡಾಡಿರುವುದು ಕೆಲಕಾಲ ಆತಂಕಕ್ಕೆ ಕಾರಣವಾಯಿತು.
ರನ್‌ವೇ ಪ್ರದೇಶದಲ್ಲಿ ನಾಯಿಗಳು ಸುತ್ತಾಡುವುದಷ್ಟೇ ಅಲ್ಲದೆ, ನಿಲ್ಲಿಸಿದ್ದ ವಿಮಾನಗಳ ಬಳಿಗೂ ತೆರಳಿರುವುದು ಕಂಡುಬಂದಿದೆ. ಈ ವೇಳೆ ರನ್‌ವೇಯಲ್ಲಿ ವಿಮಾನಗಳ ಸಂಚಾರ ಇರದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ.
ಘಟನೆ ಗಮನಿಸಿದ ತಕ್ಷಣವೇ ಎಚ್ಚೆತ್ತ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ನಡೆಸಿ ಹರಸಾಹಸಪಟ್ಟು ಬೀದಿ ನಾಯಿಗಳನ್ನು ಸೆರೆ ಹಿಡಿದರು. ಈ ಘಟನೆಯಿಂದ ಕೆಲಕಾಲ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.



