ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗರ್ಭಿಣಿ ಗೋಮಾತೆಗೆ ಶ್ರದ್ದಾ-ಭಕ್ತಿಯಿಂದ ಪೂಜಿಸಿ ಸೀಮಂತ ಕಾರ್ಯಕ್ರಮದೊಂದಿಗೆ ಮೂರು ಗೋಮಾತೆಯ ಕರುಗಳಿಗೆ ನಾಮಕರಣ ಮಾಡುವ ಮೂಲಕ ಗೋಮಾತೆಯನ್ನು ಸಂರಕ್ಷಿಸಿ ಎಂಬ ಭಕ್ತಿ ಭಾವ ಸ್ಪುರಿಸುವ ವಿಶಿಷ್ಟ ಕಾರ್ಯಕ್ರಮವು ಗದುಗಿನ ಹೊರವಲಯದಲ್ಲಿರುವ ಗಂಗಿಮಡಿ ಪ್ರದೇಶದ ಹಿರೇಹಂದಿಗೋಳ ಮಾರ್ಗದ ಗೋಶಾಲೆಯಲ್ಲಿ ಶುಕ್ರವಾರ ಜರುಗಿತು.
ಗೋ-ಸೇವಾ ಗತಿ ವಿಧಿ ಉತ್ತರ ಪ್ರಾಂತ ಮತ್ತು ಗೋ-ಜೈವಿಕ ಕೃಷಿ ಅನುಸಂಧಾನ ಕೇಂದ್ರ ಟ್ರಸ್ಟ್ ಗದಗ ಇವರ ಸಹಯೋಗದೊಂದಿಗೆ ವಿವಿಧ ಮಹಿಳಾ ಸಂಘಟನೆಗಳು ಈ ಕೈಂಕರ್ಯಕ್ಕೆ ಕೈಜೋಡಿಸಿವೆ.
ಗೋಶಾಲಾದ ಶುಚಿಗೊಳಿಸಿದ ದೇವಣಿ, ಗೀರ್ ತಳಿಯ ಗರ್ಭಿಣಿ ಗೋಮಾತೆಯನ್ನು ಮುತ್ತೆದೆಯರು ಕುಂಭದೊಂದಿಗೆ ತಳಿರು ತೋರಣಗಳಿಂದ ಅಲಂಕೃತಗೊಳಿಸಿದ್ದ ಮಂಟಪಕ್ಕೆ ಬರಮಾಡಿಕೊಂಡರು. ಈ ಗೋಮಾತೆಗೆ ಪಾದಪೂಜೆ ಮಾಡಿ ಕುಂಕುಮ, ಅರಿಷಿಣ ಹಚ್ಚಿ ಸೀರೆ ಉಡಿಸಿ, ಉಡಿ ತುಂಬಿ ಬೆಲ್ಲ, ಅಕ್ಕಿಯೊಂದಿಗೆ ಪಶು ಆಹಾರ ನೀಡಿ ನಮಿಸಿದರು.
ಅಲಂಕೃತ ತೊಟ್ಟಿಲಲ್ಲಿ ಒಂದರ ನಂತರ ಒಂದರಂತೆ ಗೋಶಾಲೆಯ ಮೂರು ಗೋಮಾತೆಯ ಕರುಗಳಿಗೆ ಬಸವ, ಕೃಷ್ಣೆ, ಗೌರಿ ಎಂದು ನಾಮಕರಣ ಮಾಡಿ ಮುತ್ತೆದೆಯರು ಜೋಗುಳ ಹಾಡಿ ಸಂಭ್ರಮಿಸಿದರು.
ಮಹಿಳಾ ಪ್ರಮುಖರಾದ ರಜನಿ ಪಂಥರ, ನಾಗವೇಣಿ ಕಟ್ಟಿಮನಿ, ಅಶ್ವಿನಿ ಜಗತಾಪ, ವೀಣಾ ಕಾವೇರಿ, ರಂಜನಾ ಕೋಟಿ, ವಿಜಯಾ ನವಲೆ ಮುಂತಾದವರ ನೇತೃತ್ವದಲ್ಲಿ ಸುಮಾರು 60ಕ್ಕೂ ಹೆಚ್ಚು ಮುತ್ತೆದೆಯರು ಕುಂಭದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ಉಡಿ ತುಂಬಿ ಗೌರವಿಸಲಾಯಿತು.
ಟ್ರಸ್ಟ್ ಕಾರ್ಯದರ್ಶಿ ರವಿ ಹಡಪದ, ಆರ್.ಎಸ್.ಎಸ್. ಪ್ರಮುಖರಾದ ನರಸಿಂಹ ಕಾಮಾರ್ತಿ, ಮೋಹನ ಮಾಳಶೆಟ್ಟಿ, ಗುರುಸಿದ್ದಪ್ಪ ಕೊಣ್ಣೂರ, ಚೇತನ್ ಮೇಹರವಾಡೆ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಗೋ ಸಂತತಿ ಉಳಿಯಬೇಕು, ಗೋ ಸಂರಕ್ಷಣೆ ಆಗಬೇಕು, ಗೋವಿನ ಹಾಲು, ಬೆಣ್ಣೆ, ಮೂತ್ರ, ಸಗಣೆಯಿಂದ ಮಾನವನಿಗೆ ಉಪಯುಕ್ತ ಸಾಮಗ್ರಿಗಳ ಉತ್ಪಾದನೆ ಹೆಚ್ಚಾಗಬೇಕೆಂಬ ಉದ್ದೇಶವಿದೆ. ಬರಲಿರುವ ದಿನಗಳಲ್ಲಿ ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಲಾಗುವುದು.
– ರವಿ ಹಡಪದ,
ಟ್ರಸ್ಟ್ ಕಾರ್ಯದರ್ಶಿ.


