ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಿಲ್ಲಾ ಕೌಶಲ್ಯ ಮಿಷನ್‌ನ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಅಧ್ಯಕ್ಷತೆಯಲ್ಲಿ ಜುಲೈ 15ರ ಸಂಜೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನೂತನ ಸಭಾಂಗಣದಲ್ಲಿ 2025-26ನೇ ಸಾಲಿನ ಜಿಲ್ಲಾ ಕೌಶಲ್ಯ ಸಮಿತಿಯ ಸಭೆ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು, ನಲ್ ಜಲ್ ಮಿತ್ರ ಯೋಜನೆ ಅಡಿ 146 ಗ್ರಾಮ ಪಂಚಾಯಿತಿಗಳಿಂದ ತಲಾ ಎರಡು ಜನರಂತೆ ಒಟ್ಟು 292 ಅಭ್ಯರ್ಥಿಗಳಿಗೆ ನೀರು ವಿತರಣಾ ನಿರ್ವಾಹಕ ತರಬೇತಿಯನ್ನು ಕೈಗೊಳ್ಳಲು ಒಂದು ವಾರದೊಳಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಜಿ.ಪಂ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನರಿಗೆ ನಿರ್ದೇಶಿಸಿದರು.
ಡೇ-ನಲ್ಮ ಯೋಜನೆಯಡಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಸಮುದಾಯ ಸಂಘಟಕರು ಮತ್ತು ಸಮುದಾಯ ಸಂಘಟನಾಧಿಕಾರಿಗಳು ಸಿಆರ್‌ಪಿಗಳ ಸಹಾಯದೊಂದಿಗೆ ಜಿಲ್ಲೆಯಲ್ಲಿ ತಮಗೆ ಗುರಿ ನಿಗದಿಪಡಿಸಿದ ಸ್ತ್ರೀಶಕ್ತಿ ಸಂಘಗಳನ್ನು ರಚಿಸಿ, ಆಗಸ್ಟ್ ತಿಂಗಳ ಅಂತ್ಯದೊಳಗಾಗಿ ವರದಿ ಸಲ್ಲಿಸಬೇಕೆಂದು ಸೂಚಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರವೀಂದ್ರ ಪಿ.ದ್ಯಾಬೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿಲಾಗುವ ನಲ್ ಜಲ್ ಮಿತ್ರ ಯೋಜನೆ, ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತ್ ಬಿಜಲಿ ಯೋಜನೆ, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ, ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ ಹಾಗೂ ಯುವ ನಿಧಿ ಪ್ಲಸ್ ಯೋಜನೆಯ ಪ್ರಗತಿ ಮತ್ತು ಪ್ರಸಕ್ತ ಸಾಲಿಗೆ ಧಾರವಾಡ ಜಿಲ್ಲೆಯ 13 ಸರಕಾರಿ ತರಬೇತಿ ಸಂಸ್ಥೆಗಳಲ್ಲಿ ಆಗಿರುವ ಪ್ರವೇಶಾತಿಗಳ ವರದಿಯನ್ನು ವಿವರಿಸಿದರು.
ಸಭೆಯಲ್ಲಿ ಐಎಎಸ್ ಪ್ರೊಬೆಷನರಿ ಅಧಿಕಾರಿ ರಿತಿಕಾ ವರ್ಮಾ, ಜಿ.ಪಂ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಬಸವರಾಜ ಗಡಾದ, ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆ ಜಂಟಿ ನಿರ್ದೇಶಕ ಆನಂದ ರಾಠೋಡ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ನಿರ್ಗತಿಕರ ವಸತಿ ಕೇಂದ್ರಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ, ಸುಸ್ಥಿತಿಯಲ್ಲಿಡಲು ಕ್ರಮ ಜರುಗಿಸಬೇಕು. ಮಹಿಳೆಯರ ಸಬಲೀಕರಣಕ್ಕಾಗಿ ಸ್ತ್ರೀಶಕ್ತಿ ಸಂಘಗಳು ಸ್ವಾವಲಂಬಿ ಬದುಕು ನಿರ್ಮಿಸಲು ಈಗಾಗಲೇ ಧಾರವಾಡ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಅಕ್ಕ ಕೆಫೆಯನ್ನು ಪ್ರಾರಂಭಿಸಿದ್ದು, ಅದೇ ರೀತಿ ಹುಬ್ಬಳ್ಳಿ ನಗರದಲ್ಲಿ ಅಕ್ಕ ಕೆಫೆಯನ್ನು ನಿರ್ಮಿಸಲು ಸ್ಥಳ ಗುರುತಿಸಬೇಕೆಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.



