ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇತ್ತೀಚೆಗೆ ಶಿರಹಟ್ಟಿ ತಾಲೂಕಾ ಕೃಷಿಕ ಸಮಾಜದ ಚುನಾವಣೆಯಲ್ಲಿ ನಜೀರಅಹ್ಮದ ಎಫ್.ಡಂಬಳ ಅವಿರೋಧವಾಗಿ ಆಯ್ಕೆಯಾಗಿದ್ದಕ್ಕೆ ಶಿರಹಟ್ಟಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹುಮಾಯೂನ್ ಮಾಗಡಿ ಸೋಮವಾರ ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹುಮಾಯೂನ್ ಮಾಗಡಿ, ಶಿರಹಟ್ಟಿ ತಾಲೂಕಿನಲ್ಲಿ ರೈತಾಪಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೃಷಿಕ ಸಮಾಜದ ವತಿಯಿಂದ ರೈತರಿಗೆ ಕಾಲಕಾಲಕ್ಕೆ ಅಗತ್ಯ ಮಾರ್ಗದರ್ಶನ ಮತ್ತು ಸರಕಾರದ ಸೌಲಭ್ಯಗಳು ತಲುಪಿಸುವ ಕೆಲಸ ಕೃಷಿಕ ಸಮಾಜದ ವತಿಯಿಂದ ಆಗಬೇಕೆಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಜೀರಅಹ್ಮದ ಡಂಬಳ, ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆದಿಯಾಗಿ ಕಾಂಗ್ರೆಸ್ ಪಕ್ಷದ ಎಲ್ಲ ಪದಾಧಿಕಾರಿಗಳ ಇಚ್ಛಾಶಕ್ತಿಯಿಂದ ಅವಿರೋಧವಾಗಿ ನನ್ನನ್ನು ಆಯ್ಕೆ ಮಾಡಿದ್ದು, ಇವರೆಲ್ಲರ ಸಲಹೆ ಸೂಚನೆಯಂತೆ ರೈತರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಕೃಷಿಕ ಸಮಾಜವನ್ನು ಮುಂಚೂಣಿಯಲ್ಲಿ ತರುತ್ತೇನೆ ಎಂದರು.
ಶಿರಹಟ್ಟಿ ತಾಲೂಕಾ ದಸ್ತಾವೇಜ ಬರಹಗಾರರ ಸಂಘದ ಅಧ್ಯಕ್ಷ ಅಶೋಕ ಹುಬ್ಬಳ್ಳಿ, ಶಂಕರ ಕುಸಲಾಪೂರ, ಬಾಬಾಜಾನ ಕೋಳಿವಾಡ, ಪ್ರವೀಣ ಹುಬ್ಬಳ್ಳಿ, ಮಹಾಂತೇಶ ದಶಮನಿ ಮುಂತಾದವರು ಉಪಸ್ಥಿತರಿದ್ದರು.