ವಿಜಯಸಾಕ್ಷಿ ಸುದ್ದಿ, ಗದಗ: ಉಜ್ವಲ ಭಾರತ, ಸದೃಢ ಸಮಾಜಕ್ಕಾಗಿ ಮಹಿಳಾ ಸಬಲೀಕರಣವು ಅತಿ ಅವಶ್ಯ. ಈ ನಿಟ್ಟಿನಲ್ಲಿ ಬಾಲ್ಯದಲ್ಲಿಯೇ ವಿದ್ಯಾರ್ಥಿನಿಯರು ದೈಹಿಕವಾಗಿ, ಮಾನಸಿಕವಾಗಿ ಸಮರ್ಥರಾಗಿರುವುದು ಒಳಿತು ಎಂದು ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿಯ ಅಧ್ಯಕ್ಷರಾದ ಅಶ್ವಿನಿ ಜಗತಾಪ್ ಅಭಿಪ್ರಾಯಪಟ್ಟರು.
ಬ್ರೈಟ್ ಹರೈಝಾನ್ ಶಾಲೆಯಲ್ಲಿ ನಡೆದ ಮೂರು ದಿನಗಳ ಕರಾಟೆ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿನಿಯರು ಎಲ್ಲ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿ ಇರಬೇಕಾದರೆ ಅವರು ತಮ್ಮ ಸ್ವರಕ್ಷಣೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು ಎಂದು ಹೇಳಿದರು.
ಆಡಳಿತಾಧಿಕಾರಿಗಳಾದ ಬಿ.ಡಿ. ಹರ್ತಿ ಹಾಗೂ ಕೆ.ಬಿ. ಹರ್ತಿ, ಶಾಲೆಯ ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮಾರ್ಗದರ್ಶನ ನೀಡಿ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ನಿಟ್ಟಿನಲ್ಲಿ ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿ `ಉಜ್ವಲ ಭವಿಷ್ಯ’ ಅಭಿಯಾನದಡಿಯಲ್ಲಿ ಮೂರು ದಿನಗಳ ಕರಾಟೆ ಕಾರ್ಯಾಗಾರಕ್ಕೆ ಸಹಕರಿಸಿ ಬೆಂಬಲಿಸಿದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಎನ್. ದೇಸಾಯಿ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಎನ್. ಗದಗ ಮಾತನಾಡಿ, ಕಾರ್ಯಾಗಾರದಲ್ಲಿ ಕಲಿತ ಸ್ವರಕ್ಷಣಾ ಕ್ರಮಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮನ್ನು ತಾವು ಸಂರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.
ಕರಾಟೆ ಶಿಕ್ಷಕರಾದ ಸುಲೇಮಾನ್‌ಸರ್ ಅವರು ಕರಾಟೆಯ ಮಹತ್ವವನ್ನು ವಿವರಿಸಿದರು. ಕಾರ್ಯಾಗಾರದಲ್ಲಿ ಇನ್ನರ್ ವ್ಹೀಲ್ ಕ್ಲಬ್ಬಿನ ಕಾರ್ಯದರ್ಶಿ ಶಿವಲೀಲಾ ಅಕ್ಕಿ, ಪೂಜಾ ಭೂಮಾ, ಸಂಪಾದಕರಾದ ವೀಣಾ ಕಾವೇರಿ, ಕೋ-ಸಿಪಿಸಿಸಿ ಶಿಲ್ಪಾ ಅಕ್ಕಿ, ಪಾಸ್ಟ್ ಪ್ರೆಸಿಡೆಂಟ್‌ಗಳಾದ ಅನ್ನಪೂರ್ಣಾ ವರವಿ, ಸುಲೋಚನಾ ಐಹೊಳ್ಳಿ, ಸದಸ್ಯರಾದ ಮಂಜುಳಾ ಅಕ್ಕಿ, ಸುಮಾ ಶಿವನಗೌಡರ, ರೇಖಾ ರೊಟ್ಟಿ, ಸ್ಮಿತಾ ಹೊಸೂರ್ ಉಪಸ್ಥಿತರಿದ್ದರು.



