ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಸ್ವಾವಲಂಬಿ ಜೀವನ ನಡೆಸಲು ಆದ್ಯತೆ ನೀಡಬೇಕು. ಎಲ್ಲರಿಗೂ ಉದ್ಯೋಗ ದೊರಕುವುದು ಕಷ್ಟಸಾಧ್ಯ. ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಸ್ವಯಂ ಉದ್ಯೋಗ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ತಾ.ಪಂ ಸಭಾಭವನದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಕೈಗಾರಿಕೆ ಇಲಾಖೆಯಿಂದ ಕೊಡಮಾಡುವ ಹೊಲಿಗೆ ಯಂತ್ರಗಳನ್ನು ಗುರುವಾರ ಫಲಾನುಭವಿಗಳಿಗೆ ವಿತರಣೆ ಮಾಡಿ ಅವರು ಮಾತನಾಡಿದರು.
ಇದೀಗ ಇಲಾಖೆಗಳ ಯೋಜನೆ ಮೂಲಕ ಮಹಿಳೆಯರಿಗೆ ವಿದ್ಯುತ್ ಹೊಲಿಗೆ ಯಂತ್ರವನ್ನು ನೀಡಲಾಗಿದ್ದು, ಹೊಲಿಗೆ ಉದ್ಯೋಗದಲ್ಲಿ ಹೆಚ್ಚು ಪರಿಣಿತಿ ಪಡೆದು ತನ್ಮೂಲಕ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳುವದರ ಜೊತೆಗೆ ಇಂತಹ ಯೋಜನೆಗಳ ಸದುಪಯೋಗಪಡಿಸಿಕೊಂಡು ಜೀವನ ಕಂಡುಕೊಳ್ಳಬೇಕು. ಫಲಾನುಭವಿಗಳು ಪಡೆದುಕೊಂಡ ಹೊಲಿಗೆ ಯಂತ್ರವನ್ನು ಮತ್ತೊಬ್ಬರಿಗೆ ಮಾರುವಂತಿಲ್ಲ. ಇದಕ್ಕಾಗಿ ಇಲಾಖೆ ವತಿಯಿಂದ ವಿಶೇಷ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಅಧಿಕಾರಿಗಳು ಫಲಾನುಭವಿಗಳ ಮನೆಗೆ ಬಂದು ಪರಿಶೀಲನೆ ಮಾಡಲಿದ್ದಾರೆ. ಮಹಿಳೆಯರು ಸ್ವಯಂ ಸೇವಾ ಸಂಸ್ಥೆಗಳನ್ನು ರಚಿಸಿಕೊಂಡು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಡಿ. ದೇವರಾಜು ಅರಸು ನಿಗಮ, ಜವಳಿ ಮತ್ತು ಕೈಮಗ್ಗ ಇಲಾಖೆಯಿಂದ ಒಟ್ಟು 23 ಫಲಾನುಭವಿಗಳಿಗೆ, ಕೈಗಾರಿಕೆ ಇಲಾಖೆಯಿಂದ 39 ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾ.ಪಂ ಇಓ ಧರ್ಮರ ಕೃಷ್ಣಪ್ಪ, ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಸಹಾಯಕ ಅಭಿವೃದ್ಧಿ ಅಧಿಕಾರಿ ಪ್ರದೀಪ ಕೊಣ್ಣೂರ, ಕೈಗಾರಿಕೆ ಇಲಾಖೆಯ ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ ಜಿ.ಪಂ, ಇಲಾಖೆಯ ಆರ್.ಡಿ. ಕದಡಿ, ನಿಂಗಪ್ಪ ಬನ್ನಿ, ಜಾನು ಲಮಾಣಿ, ಸಂಜೀವ ದೇಸಾಯಿ, ತುಕ್ಕಪ್ಪ ಪೂಜಾರ, ಕೃಷ್ಣಾ ಬಿದರಳ್ಳಿ, ಗಂಗಾಧರ ಮೆಣಸಿನಕಾಯಿ ಮುಂತಾದವರು ಇದ್ದರು.



