ಉಪಕಸಬು ಮಾಡಿ ಆರ್ಥಿಕವಾಗಿ ಸಬಲರಾಗಿ : ಡಾ. ಪಿ.ಎಲ್. ಪಾಟೀಲ

0
Self Reliance Award Ceremony by Deal Foundation Sidbi
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕೃಷಿಯಲ್ಲಿ ಗುಣಾತ್ಮಕ ಪ್ರಗತಿಯಾಗಿದ್ದು, ಕೃಷಿಯೊಂದಿಗೆ ಉಪಕಸಬುಗಳನ್ನು ಮಾಡುವ ಮೂಲಕ ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.
ಅವರು ಗುರುವಾರ ಗದುಗಿನ ಕೃಷಿ ಸಂಶೋಧನಾ ಕೇಂದ್ರದಲ್ಲಿ ಮೇವುಂಡಿಯ ಡೀಲ್ ಫೌಂಡೇಶನ್ ಹಾಗೂ ಸಿಡ್‌ಬಿದಿಂದ ಏರ್ಪಡಿಸಿದ್ದ ಸುಸ್ಥಿರ ಜೀವನೋಪಾಯ ಸ್ವಾವಲಂಬನಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಬ್ಯಾಂಕ್‌ಗಳಿಂದ ಆರ್ಥಿಕ ನೆರವು ಪಡೆದುಕೊಂಡು ಕೋಳಿ-ಕುರಿ ಸಾಕಾಣಿಕೆ, ಜೇನು, ಹೈನುಗಾರಿಕೆ ಮಾಡಿ ಆರ್ಥಿಕವಾಗಿ ಮುನ್ನಡೆ ಸಾಧಿಸಬೇಕು. ಅಂದಾಗ ಮಾತ್ರ ಕುಟುಂಬ, ಸಮಾಜ, ದೇಶ ಆರ್ಥಿಕವಾಗಿ ಮುನ್ನಡೆ ಸಾಧಿಸಲು ಸಾಧ್ಯ ಎಂದರು.
ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗಿ ಮಹಿಳೆಯರು ಮನೆಗೆಲಸ ಮುಗಿದ ಬಳಿಕ ಸಣ್ಣ ಸಣ್ಣ ಉದ್ಯಮ ಆರಂಭಿಸಬೇಕು. ಸ್ತ್ರೀ ಶಕ್ತಿ ದೊಡ್ಡದು. ಮಹಿಳೆಯರು ಸಂಘಟಿತರಾಗಿ ಸಂಘವನ್ನು ಬಲವರ್ಧನೆ ಮಾಡುವ ಮೂಲಕ ತಾವೂ ಆರ್ಥಿಕವಾಗಿ ಸದೃಢರಾಗಬೇಕೆಂದರು.
ವಿಕಲಚೇತನರು ವಿಚಲಿತರಾಗುವದು ಸಲ್ಲದು. ವಿಕಲಚೇತನರಲ್ಲಿಯೂ ಪ್ರತಿಭೆ, ಸಾಧಿಸಬೇಕೆನ್ನುವ ಛಲ ಅಚಲವಾಗಿರುತ್ತದೆ. ಅದನ್ನು ಸದ್ಭಳಕೆ ಮಾಡಿಕೊಂಡು ಮುನ್ನಡೆ ಸಾಧಿಸಬೇಕೆಂದರಲ್ಲದೆ ಡೀಲ್ ಫೌಂಡೇಶನ್ ಹಾಗೂ ಸಿಡ್‌ಬಿ ಏರ್ಪಡಿಸಿರುವ ಸುಸ್ಥಿರ ಜೀವನೋಪಾಯ ಕಾರ್ಯಕ್ರಮಗಳು ಜನಮುಖಿ, ಸಮಾಜಮುಖಿಯಾಗಿವೆ ಎಂದರು.
ಮುಖ್ಯ ಅತಿಥಿ, ಜಿಮ್ಸ್ ನಿರ್ದೆಶಕ ಡಾ. ಬಿ.ಪಿ. ಬೊಮ್ಮನಹಳ್ಳಿ, ಗ್ರಾಮೀಣ ವಿ.ವಿಯ ಡಾ.ಸುರೇಶ ನಾಡಗೌಡ್ರ ಮಾತನಾಡಿ, ವಿಕಲ ಚೇತನರಲ್ಲಿ ಆತ್ಮಸ್ಥೈರ್ಯ ತುಂಬುವ ಹಾಗೂ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವಲ್ಲಿ ಸಂಸ್ಥೆ ಉತ್ತಮವಾಗಿ ಕಾರ್ಯ ಮಾಡುತ್ತಿದೆ ಎಂದರು.
ಸಾಧನೆ ಮಾಡಿದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ನಗದು ಬಹುಮಾನದೊಂದಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ವೇದಿಕೆಯ ಮೇಲೆ ಗಣ್ಯರಾದ ಜಿ.ಎ. ಅರುಣ, ನಿಕ್ ಎಡ್ವವರ್ಡ್ಸ, ಸುರೇಂದ್ರ ಸರಾಫ, ಡಾ. ಬಿ.ಡಿ. ಬಿರಾದಾರ, ಡಾ. ಎಸ್.ಎಲ್. ಪಾಟೀಲ, ಗಿರೀಶ್ ದೀಕ್ಷಿತ್, ಡಾ. ಸಿ.ಕೆ. ವೇಣುಗೋಪಾಲ, ಎಸ್.ಕೆ. ಮುದ್ಲಾಪೂರ, ಡಾ. ಜಾವೇದ ಮುಲ್ಲಾ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.
ಸಿದ್ಧಲಿಂಗೇಶ್ವರ ಕಲಾ ತಂಡದಿಂದ ಪ್ರಾರ್ಥನೆ ಗೀತೆ ಹಾಗೂ ಜನಜಾಗೃತಿ ಮೂಡಿಸುವ ಕಿರು ನಾಟಕ ಪ್ರದರ್ಶನಗೊಂಡಿತು. ಉಮಾ ಚಿಲಗೌಡ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಕುಮಾರ ಶಿರೋಳ ಹಾಗೂ ವೀಣಾ ಸಾಕಣ್ಣವರ ನಿರೂಪಿಸಿದರು. ಸಾಗರ ವಿರುಪಣ್ಣವರ ವಂದಿಸಿದರು.
ಸಮಾರಂಭದಲ್ಲಿ ಗದಗ ಜಿಲ್ಲೆಯ ವಿವಿಧ ತಾಲೂಕು, ಗ್ರಾಮೀಣ ಪ್ರದೇಶಗಳಿಂದ ಕೃಷಿಕರು, ವಿಕಲಚೇತನರು, ಮಹಿಳಾ ಸ್ವ-ಸಹಾಯ ಗುಂಪುಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ನೇತ್ರದಾನಕ್ಕೆ ವಾಗ್ದಾನ
ವಿಕಲಚೇತನರ ಬದುಕು-ಬವಣೆ ಅರಿತ ಸೊರಟೂರಿನ ಪ್ರಗತಿಪರ ರೈತರಾದ ಅರವಿಂದ ರಾಜಪುರೋಹಿತ ಅವರು ಮರಣಾನಂತರ ನೇತ್ರದಾನ ಮಾಡುವದಾಗಿ ವೇದಿಕೆಗೆ ಬಂದು ಸ್ವಯಂ ಸ್ಪೂರ್ತಿಯಿಂದ ಘೋಷಿಸಿ ಅಗತ್ಯ ದಾಖಲೀಕರಣಕ್ಕೆ ಕೇಳಿಕೊಂಡರು. ಜಿಮ್ಸ್ ನಿರ್ದೆಶಕ ಡಾ. ಬಿ.ಪಿ. ಬೊಮ್ಮನಹಳ್ಳಿ ಜಿಮ್ಸ್ನಲ್ಲಿ ನೇತ್ರದಾನ-ದೇಹದಾನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದರು.

Spread the love
Advertisement

LEAVE A REPLY

Please enter your comment!
Please enter your name here