ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮಹಿಳೆ ಮನಸ್ಸು ಮಾಡಿದಲ್ಲಿ ಸಾಧನೆ ಅಸಾಧ್ಯವಲ್ಲ ಎನ್ನುವದಕ್ಕೆ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಕೂಲಿ ಕೆಲಸದೊಂದಿಗೆ ಜೀವನ ಸಾಗಿಸುತ್ತಿರುವ ನೇತ್ರಾವತಿ ಮಂಜುನಾಥ ಮಹೇಂದ್ರಕರ ಸಂಜೀವಿನಿ ಯೋಜನೆಯ ಮೂಲಕ ಯಶಸ್ವಿಯಾಗಿ, ಮಾದರಿಯಾಗಿದ್ದಾರೆ.
ಸಂಜೀವಿನಿ ಯೋಜನೆಯಡಿ ಸಿಬ್ಬಂದಿಗಳ ಮಾರ್ಗದರ್ಶನಲ್ಲಿ 2017-18ರ ಸಾಲಿನಲ್ಲಿ ನೇತ್ರಾವತಿ ತಮ್ಮ ಗ್ರಾಮದ ಮನೆಯ ಅಕ್ಕ- ಪಕ್ಕದ 10 ಮಹಿಳೆಯರು ಸೇರಿ ಕೊಟ್ರೇಶ್ವರ ಮಹಿಳಾ ಸ್ವ ಸಹಾಯ ಗುಂಪು ರಚಿಸಿದರು. ನಂತರ ಗುಂಪಿನಲ್ಲಿ 10 ಸಾವಿರ ಆಂತರಿಕ ಸಾಲ ಪಡೆದು ಒಂದು ಹೊಲಿಗೆ ಯಂತ್ರ ಖರೀದಿಸಿ ಬಟ್ಟೆಗಳನ್ನು ಹೊಲಿದು ಜೀವನ ನಡೆಸುತ್ತ, ತಿಂಗಳಿಗೆ ಸುಮಾರ 1000-1200 ಆದಾಯ ಗಳಿಸುತ್ತಿಸುತ್ತಿದ್ದರು. ನಂತರ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ಸಮುದಾಯ ಬಂಡಾಳ ನಿಧಿಯ ಮೂಲಕ ಆರಂಭದಲ್ಲಿ ಸುಮಾರು.1.5 ಲಕ್ಷ ರೂಪಾಯಿ ಸಾಲ ಪಡೆದು ಸಣ್ಣ ಪ್ರಮಾಣದಲ್ಲಿ ಬಟ್ಟೆ ವ್ಯಾಪಾರ ಪ್ರಾರಂಭ ಮಾಡಿ ಅದರಲ್ಲಿ ಯಶಸ್ಸು ಕಂಡಿದ್ದಾರೆ.
ಶಿಗ್ಲಿ ಗ್ರಾ.ಪಂ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆಯಾಗಿ 2021-22ನೇ ಸಾಲಿನಲ್ಲಿ ಆಯ್ಕೆ ಆಗುವ ಮೂಲಕ ಗ್ರಾಮದ ಬಡ ಮಹಿಳೆಯರಿಗೆ ಸ್ವ-ಸಹಾಯ ಗುಂಪು ರಚನೆ, ಉಳಿತಾಯ ಮನೋಭಾವ ಅವರಿಗೆ ಸಲಹೆ, ಮಾರ್ಗದರ್ಶ ನೀಡುತ್ತ ಸಾವಿರಾರು ಬಡ ಮಹಿಳೆಯರನ್ನು ಒಕ್ಕೂಟದ ವ್ಯಾಪ್ತಿಗೆ ಬರುವಂತೆ ಮಾಡಿದ್ದಲ್ಲದೆ, ಈ ಕಾರ್ಯವನ್ನು ನಿರಂತರವಾಗಿ ಮುನ್ನಡೆಸುತ್ತಿದ್ದಾರೆ.
ಮನೆಯ ಯಜಮಾನ ಮಂಜುನಾಥ ಮಹೇಂದ್ರಕರ ಅವರ ಸಹಕಾರದಲ್ಲಿ ಸರ್ಕಾರದ ವಿವಿಧ ಯೋಜನೆಯ ಸೌಲಭ್ಯಗಳನ್ನು ಪಡೆಯುವ ಮೂಲಕ ಕಿರು ಗಾರ್ಮೆಂಟ್ಸ್ ಪ್ರಾರಂಭ ಮಾಡಿದರು. ಈ ಗಾರ್ಮೆಂಟ್ಸ್ ಪ್ರಸ್ತುತ 5 ಮಹಿಳೆಯರಿಗೆ ಕೆಲಸ ನೀಡಿದ್ದು, ಈ ಗಾರ್ಮೆಂಟ್ಸ್ನಲ್ಲಿ ಮಕ್ಕಳ ವಿವಿಧ ಸಿದ್ದ ಉಡುಪುಗಳನ್ನು ತಯಾರಿಸುವ ಮೂಲಕ ರಾಜ್ಯ ಮತ್ತು ಅನ್ಯ ರಾಜ್ಯಗಳಿಗೆ ನಿರಂತರವಾಗಿ ಸರಬರಾಜು ಮಾಡುತ್ತ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಜ್ಯ ಮತ್ತು ಬೇರೆ ರಾಜ್ಯಗಳಲ್ಲಿ ಈ ಮಕ್ಕಳ ಸಿದ್ದ ಉಡುಪುಗಳಿಗೆ ಉತ್ತಮ ಬೇಡಿಕೆ ಬರುತ್ತಿದ್ದು, ಅವುಗಳನ್ನು ನಿರಂತರವಾಗಿ ಸರಬರಾಜು ಮಾಡುತ್ತ, ವ್ಯಾಪಾರಸ್ಥರು ಮತ್ತು ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಂಜೀವಿನಿ ಯೋಜನೆಯಡಿ ಮೂಲಕ ಬೃಹತ್ ಪ್ರಮಾಣದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳಗಳಲ್ಲಿ ರಾಜ್ಯದ ಬೆಳಗಾವಿ, ಬೆಂಗಳೂರು, ಮೈಸೂರು ಮುಂಬೈ ಮತ್ತು ದೆಹಲಿ ಸೇರಿದಂತೆ ತಮ್ಮ ಗಾರ್ವ್ಮೆಂಟ್ಸ್ನಲ್ಲಿ ತಯಾರಿಸಿ ಮಕ್ಕಳ ವಿವಿಧ ಸಿದ್ದ ಉಡುಪುಗಳ ಮಾರಾಟ ಮಳಿಗೆಯಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಕಳೆದ ಜನವರಿ 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯಿಂದ ಆಯ್ಕೆಯಾಗುವ ಮೂಲಕ ದೆಹಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆ ಎಂಬ ಹೆಗ್ಗಳಿಕೆಗೆ ನೇತ್ರಾವತಿ ಪಾತ್ರರಾಗಿದ್ದಾರೆ.
ಸಂಜೀವಿನಿ ಯೋಜನೆ ಮೂಲಕ ಆರಂಭವಾದ ವ್ಯಾಪಾರ, ಪ್ರಸ್ತುತ ಚಿಕ್ಕ ಮಕ್ಕಳ ಸಿದ್ದ ಉಡುಪುಗಳು ಮತ್ತು ಶಿಗ್ಲಿ ಸೀರೆ ಮಾರಾಟ ಮಾಡುತ್ತ, ತಿಂಗಳಿಗೆ ಸುಮಾರು 18-20 ಸಾವಿರ ರೂ ಆದಾಯ ಗಳಿಸುವ ಮೂಲಕ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ಸಂಜೀವಿನಿ ಯೋಜನೆಯಡಿ ನಮ್ಮ ಗ್ರಾಮದಲ್ಲಿ ಗ್ರಾ.ಪಂ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟ ಆರಂಭಿಸುವ ಮೂಲಕ ಮಹಿಳೆಯರಿಗೆ ಸಾಲ ಸೌಲಭ್ಯಗಳು, ಸಲಹೆ, ಮಾರ್ಗದರ್ಶನ ಮತ್ತು ತರಬೇತಿ ನೀಡಿದ್ದಾರೆ. ಯೋಜನೆಯಡಿ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸುವುದರಿಂದ ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಸಿಗುತ್ತಿದೆ. ಇದರಿಂದ ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದೆ ಬರಲು ಸಹಕಾರಿಯಾಗಿದೆ.
– ನೇತ್ರಾವತಿ ಮಹೇಂದ್ರಕರ.