ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗೋವು ದೇವರ ಸ್ವರೂಪ ಎಂಬ ಭಾವನೆ ಹಿಂದೂಗಳಲ್ಲಿದೆ. ಪ್ರತಿಯೊಬ್ಬ ರೈತರು ಗೋವಿಗೆ ವಿಶೇಷ ಸ್ಥಾನಮಾನ ಕೊಟ್ಟು ಅದನ್ನು ಮನೆ ಮಗಳಂತೆ ನೋಡಿಕೊಳ್ಳುತ್ತಾರೆ. ದನಕರುಗಳು ರೈತರ ಜೀವನ ನಾಡಿಗಳಾಗಿವೆ. ಈ ನಿಟ್ಟಿನಲ್ಲಿ ಸಮೀಪದ ರಾಮಗಿರಿ ಗ್ರಾಮದ ರೈತ ಕುಟುಂಬ ಚೊಚ್ಚಲ ಹೆರಿಗೆಗೆ ಸಿದ್ಧವಾಗಿರುವ ಗೋವಿಗೆ ಶುಕ್ರವಾರ ಕುಟುಂಬಸ್ಥರೆಲ್ಲರೂ ಸೇರಿ ಸಿಂಗರಿಸಿ ಹಬ್ಬದಂತೆ ಗೋವಿಗೆ ಸೀಮಂತ ಮಾಡಿದ್ದಾರೆ.
ತುಂಬು ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡುವುದು ವಾಡಿಕೆ. ದಿನಗಳು ತುಂಬಿದ ವೇಳೆಯಲ್ಲಿ ಮಗಳಿಗೆ ಸೀಮಂತ ಕಾರ್ಯ ಮಾಡುವಂತೆ ಗೋವಿಗೂ ಸೀರೆ ಉಡಿಸಿ, ಸಿಂಗರಿಸಿ, ಸೋಬಾನೆ ಪದ ಹಾಡಿ, ಆರತಿ ಬೆಳಗಿ ಮನೆ ಮಗಳಿಗೆ ಆಶೀರ್ವದಿಸುವಂತೆ ತಾಲೂಕಿನ ರಾಮಗಿರಿ ಗ್ರಾಮದ ನಾಗರಾಜ ಮಡಿವಾಳರ ಮನೆಯಲ್ಲಿ ಗರ್ಭಿಣಿ ಆಕಳಿಗೆ ಸೀಮಂತದ ಕಾರ್ಯ ನೆರವೇರಿಸಿದ್ದಾರೆ. ಅಲ್ಲದೆ ವಿವಿಧ ಭಕ್ಷ ಮಾಡಿ ಗ್ರಾಮಸ್ಥರಿಗೆ ಉಣಬಡಿಸಿ ಸಂಭ್ರಮಿಸಿದ್ದಾರೆ.
ರೈತ ನಾಗಾರಾಜ ಮಡಿವಾಳರ ಮಾತನಾಡಿ, ಭಾರತೀಯ ಸಂಸ್ಕೃತಿ-ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಕಾಮಧೇನು ಕಲ್ಪವೃಕ್ಷ ಎಂಬಂತೆ ಗೋಮಾತೆಗೆ ವಿಶಿಷ್ಟ ಸ್ಥಾನವಿದೆ. ಅಮೃತ ತಳಿಯ ಗೋಮಾತೆ ಚೊಚ್ಚಲ ಕರುವಿಗೆ ಜನ್ಮ ನೀಡುತ್ತಿರುವುದರಿಂದ ಯಥಾವತ್ತಾಗಿ, ಪೂಜೆ ಪುನಸ್ಕಾರಗಳು ಎಲ್ಲ ಕಾರ್ಯ ಸಮರ್ಪಿಸಿ ಗೋಮಾತೆಗೆ ಗೌರವ ಸಲ್ಲಿಸುತ್ತಿದ್ದೇವೆ ಎಂದರು.
ನಾಗರಾಜ ಮಡಿವಾಳರ ತಮ್ಮ ಮನೆಯಲ್ಲಿ ಗೋವು ಸಾಕಿದಾಗಿನಿಂದಲೂ ತಮ್ಮ ಮನೆಗೆ ಒಳ್ಳೆಯದಾಗಿದೆ ಎನ್ನುವ ನಂಬಿಕೆಯಿಂದ ಈ ಸಂಪ್ರದಾಯ ಹಬ್ಬದಂತೆ ಆಚರಿಸಿದರು. ಗೋಮಾತೆಗೆ ಆರತಿ ಬೆಳಗಿದ ಮುತ್ತೈದೆಯರು ಗೋವಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ನೂರಾರು ಜನರಿಗೆ ಕರಿಗಡಬು, ತುಪ್ಪ, ರೊಟ್ಟಿ, ಚಪಾತಿ, ಕಾಳು ಪಲ್ಲೆ ಸೇರಿದಂತೆ ಸವಿ ಭೋಜನ ಉಣಬಡಿಸಿದರು. ಈ ಅಪರೂಪದ ಕಾರ್ಯಕ್ರಮ ಜನತೆಯ ಮೆಚ್ಚುಗೆಗೆ ಪಾತ್ರವಾಯಿತು.
ಈ ವೇಳೆ ಈರಮ್ಮ ಮಡಿವಾಳರ, ಗುಡ್ಡಪ್ಪ ಬೇವಿನಮರದ, ಮಾರ್ತಾಂಡಪ್ಪ ಗಂಜಿಗಟ್ಟಿ, ಪರಸಪ್ಪ ಹುಣಸೀಮರದ, ನಬಿಸಾಬ್ ಅಣ್ಣಿಗೇರಿ, ಶಿವಾನಂದ, ಲಕ್ಷಣ ಯರಗುಪ್ಪಿ, ಎಸ್.ಬಿ. ಸುಂಕದ, ಹನಮಂತಪ್ಪ ಹುಣಶಿಮರದ ಸೇರಿದಂತೆ ಮನೆಯ ಸದಸ್ಯರೆಲ್ಲರೂ ಹಾಜರಿದ್ದರು.



