ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಮಕ್ಕಳಿಗಾಗಿ ಆಸ್ತಿಯನ್ನು ಮಾಡದೇ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ನಿಮ್ಮ ಮಕ್ಕಳ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ತಪ್ಪದೇ ಇಂದಿನಿಂದಲೇ ಶಾಲೆಗೆ ಕಳಿಸಿ ಎಂದು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅರ್ಜುನ್ ಪರುಸಪ್ಪನ ತಿಳಿಸಿದರು.
Advertisement
ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ, ಶಾಲೆಯ ದಾಖಲಾತಿಗೆ ಒಳಪಡುವ ಕಾಲೋನಿಗಳಲ್ಲಿ ಮಕ್ಕಳೊಂದಿಗೆ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ಸೇರಿ, ಕಡತಗಳನ್ನು ಮಕ್ಕಳ ಪಾಲಕರಿಗೆ ನೀಡುವ ಮೂಲಕ, 5 ವರ್ಷ 5 ತಿಂಗಳು ತುಂಬಿದ ಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಮಕ್ಕಳು ಘೋಷವಾಕ್ಯವನ್ನು ಕೂಗುತ್ತಾ ಶಾಲೆಗೆ ಆಗಮಿಸಿದರು.
ಶಾಲಾ ಶಿಕ್ಷಕರು ಮಕ್ಕಳಿಗೆ ಅಕ್ಷತೆಯನ್ನು ಹಾಕಿ, ಹೂಗಳನ್ನು ನೀಡುವ ಮೂಲಕ ಶೈಕ್ಷಣಿಕ ವರ್ಷದ ಮೊದಲ ದಿನಕ್ಕೆ ಸ್ವಾಗತ ಕೋರಿದರು.