ಗದಗ : ಕೇಂದ್ರ ಪುರಾತತ್ವ ಇಲಾಖೆ (ASI)ಯ ನಿವೃತ್ತ ಸೂಪರಿಂಟೆಂಡಿಂಗ್ ಆರ್ಕಿಯಾಲಜಿಸ್ಟ್ ಹಾಗೂ ಲಕ್ಕುಂಡಿ ಉತ್ಖನನದ ನಿರ್ದೇಶಕರಾಗಿದ್ದ ಖ್ಯಾತ ಪುರಾತತ್ವ ತಜ್ಞ ಶ್ರೀ ಟಿ. ಎಂ. ಕೇಶವ್ ಅವರು ವಿಧಿವಶರಾಗಿದ್ದಾರೆ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ.
1979ರಲ್ಲಿ ಪುರಾತತ್ವ ಇಲಾಖೆಗೆ ತಾಂತ್ರಿಕ ಸಹಾಯಕರಾಗಿ ಸೇವೆ ಪ್ರವೇಶಿಸಿದ ಟಿ.ಎಂ. ಕೇಶವ್ ಅವರು, ಅಜಂತಾ–ಎಲ್ಲೋರಾ ಗುಹೆಗಳು, ಹಂಪಿ, ಬಾದಾಮಿ, ಬನವಾಸಿ, ಹಾಲೇಬೀಡು, ಬೆಳೂರು, ಶ್ರವಣಬೆಳಗೊಳ ಸೇರಿದಂತೆ ದೇಶದ ಅನೇಕ ಪ್ರಮುಖ ಐತಿಹಾಸಿಕ ತಾಣಗಳ ಸಂಶೋಧನೆ, ಉತ್ಖನನ ಮತ್ತು ಸಂರಕ್ಷಣಾ ಕಾರ್ಯಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಹಾಲೇಬೀಡಿನ ನಾಗರೇಶ್ವರ ದೇವಾಲಯ ಸಂಕೀರ್ಣ, ಬನವಾಸಿಯ ಬೌದ್ಧ ಸ್ತೂಪ, ಗುಡ್ನಾಪುರದ ಅರಮನೆ ಅವಶೇಷಗಳು, ಹಂಪಿಯ ವಿಜಯನಗರ ಕಾಲದ ಅರಮನೆಗಳ ಪತ್ತೆ ಸೇರಿದಂತೆ ಅನೇಕ ಅಪರೂಪದ ಐತಿಹಾಸಿಕ ಸಂಶೋಧನೆಗಳು ಅವರ ಸೇವಾ ಅವಧಿಯ ಪ್ರಮುಖ ಸಾಧನೆಗಳಾಗಿವೆ. ಕನಗನಹಳ್ಳಿ (ಸನ್ನತಿ)ಯಲ್ಲಿ ಮೌರ್ಯ–ಶಾತವಾಹನ ಕಾಲದ ಅತ್ಯಂತ ಪ್ರಾಚೀನ ಸ್ತೂಪದ ಉತ್ಖನನವೂ ಅವರ ನೇತೃತ್ವದಲ್ಲೇ ನಡೆದಿದೆ.
ಹೋಯ್ಸಳ, ಚಾಲುಕ್ಯ ಮತ್ತು ವಿಜಯನಗರ ಶೈಲಿಯ ವಾಸ್ತುಶಿಲ್ಪದಲ್ಲಿ ಅಪಾರ ಪರಿಣತಿ ಹೊಂದಿದ್ದ ಟಿ.ಎಂ. ಕೇಶವ್ ಅವರು, 50ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಮತ್ತು ಗ್ರಂಥಗಳನ್ನು ರಚಿಸಿದ್ದರು. ಹಂಪಿ ವಿಶ್ವಪಾರಂಪರ್ಯ ತಾಣಕ್ಕೆ ಸಂಬಂಧಿಸಿದಂತೆ ಯುನೆಸ್ಕೊ ತಂಡಗಳೊಂದಿಗೆ ಕಾರ್ಯನಿರ್ವಹಿಸಿದ ಅನುಭವವೂ ಅವರದ್ದು.
ಇತ್ತೀಚೆಗೆ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರು ನಡೆಯುತ್ತಿದ್ದ ಉತ್ಖನನ ಕಾರ್ಯವು ಅವರ ಮಾರ್ಗದರ್ಶನದಲ್ಲೇ ನಡೆಯುತ್ತಿತ್ತು. ಅವರ ನಿಧನದಿಂದ ಪುರಾತತ್ವ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಟಿ.ಎಂ. ಕೇಶವ್ ಅವರ ಅಗಲಿಕೆಗೆ ಲಕ್ಕುಂಡಿ ಪ್ರಾಧಿಕಾರದ ಆಯುಕ್ತರು, ಸಿಬ್ಬಂದಿ, ಪುರಾತತ್ವ ವಿದ್ವಾಂಸರು ಹಾಗೂ ಇತಿಹಾಸಾಸಕ್ತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.



