ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಈ ದೇಶವನ್ನು ರಕ್ಷಿಸುವ ಸೈನಿಕರನ್ನು ಮತ್ತು ಈ ಸಮಾಜದ ಎಲ್ಲರಿಗೂ ತಮ್ಮ ಜೀವನ ಅನುಭವವನ್ನು ತಿಳಿಸುವ ಅಮೂಲ್ಯ ರತ್ನಗಳಾದ ಹಿರಿಯ ನಾಗರಿಕರನ್ನು ಗುರುತಿಸಿ ಸನ್ಮಾನಿಸುತ್ತಿರುವ ಕೊಟ್ಟೂರೇಶ್ವರ ಮಠದ ಕಾರ್ಯ ಶ್ಲಾಘನೀಯ ಎಂದು ಕೊಪ್ಪಳದ ಶಿಕ್ಷಕ ಶರಣಯ್ಯ ಹಿರೇಮಠ ಹೇಳಿದರು.
ಸಮೀಪದ ಕೊಟ್ಟೂರೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾರ್ಗಿಲ್ ವಿಜಯೋತ್ಸವದ ನಿಮಿತ್ತ ಮಾಜಿ ಸೈನಿಕರು ಹಾಗೂ 80 ವರ್ಷ ಮೇಲ್ಟಟ್ಟ ಹಿರಿಯರ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಳೆ, ಚಳಿ, ಬಿಸಿಲು, ಗಾಳಿ ಎನ್ನದೇ ದೇಶ ರಕ್ಷಣೆಯಲ್ಲಿ ತಮ್ಮ ಜೀವವನ್ನು ಒತ್ತೆ ಇಟ್ಟು ಸೇವೆ ಸಲ್ಲಿಸಿದ ಸೈನಿಕರ ಕಾರ್ಯ ಶ್ಲಾಘನೀಯ. ನಮ್ಮೆಲ್ಲರ ಭವಿಷ್ಯಕ್ಕೆ ತಮ್ಮ ಅನುಭವವನ್ನು ಧಾರೆ ಎರೆಯುವ ಜೀವಗಳು ಅಮೂಲ್ಯ ರತ್ನಗಳು ಇದ್ದಂತೆ. ಅವರ ಆರೋಗ್ಯದ ಬಗ್ಗೆ ನಾವೆಲ್ಲರೂ ಕಾಳಜಿ ವಹಿಸಬೇಕು ಎಂದರು.
ಮಾಜಿ ಸೈನಿಕ ಮಹಾಂತೇಶ ಲಕ್ಕುಂಡಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತ ಮತ್ತು ದೇಶವನ್ನು ರಕ್ಷಣೆ ಮಾಡುವ ಸೈನಿಕರನ್ನು ಗುರುತಿಸಿ ಸನ್ಮಾನಿಸುತ್ತಿರುವ ಶ್ರೀ ಮಠದ ಕಾರ್ಯ ಶ್ಲಾಘನೀಯ ಎಂದರು.
ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಬಸವರಾಜ ಇಲಕಲ್, ಅಮರಗುಂಡಪ್ಪನವರ ಅರಳಿ, ಮಲ್ಲಿಕಾರ್ಜುನಯ್ಯ ಶಶಿಮಠ, ಮಹೇಶ ಕುಂಬಾರ ಹಾಗೂ ಹಳ್ಳಿಗುಡಿ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಕೆ.ಬಿ. ವೀರಾಪೂರ ಹಾಗೂ ನಾಗೇಂದ್ರ ಅರ್ಕಸಾಲಿ ಪ್ರಾರ್ಥಿಸಿದರು. ಶಿಕ್ಷಕ ಸಿದ್ದಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ಕೆ.ಬಿ. ಕೊಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಸ್.ಸಿ. ಸರ್ವಿ ವಂದಿಸಿದರು.