ಹುಬ್ಬಳ್ಳಿ: ಹಿರಿಯ ಅಧಿಕಾರಿಗಳು ಲಾಠಿ ಹಿಡಿದು ಚಾರ್ಜ್ ಮಾಡಿದ್ದು ತನಿಖೆ ಆಗಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿ ಇಲ್ಲದೆ ಬೆಳಗಾವಿ ಅಧಿವೇಶನ ಕಾಟಾಚಾರಕ್ಕೆ ನಡೆಸಲಾಗಿದೆ.
ಅಧಿವೇಶನ ಪಂಚಮಸಾಲಿ ಲಾಠಿ ಪ್ರಹಾರ ದಿಂದ ಆರಂಭವಾಗಿ, ಸಿಟಿ ರವಿ ಅವರ ಮಾನಸಿಕ ಹಿಂಸೆಯಿಂದ ಮುಗಿತು. ಅಂದರೆ ಪೊಲೀಸರ ಲಾಠಿಯಿಂದ ಆರಂಭಗೊಂಡು ಪೊಲೀಸರ ಹಿಂಸೆಯಿಂದ ಅಂತ್ಯವಾಗಿದೆ ಎಂದರು. ಇನ್ನೂ ರಾಜ್ಯದಲ್ಲಿ ಪೋಲಿಸ್ ರಾಜ್ಯ ಇದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದ್ದು, ಹಿರಿಯ ಅಧಿಕಾರಿಗಳು ಲಾಠಿ ಹಿಡಿದಿದ್ದು ಚಾರ್ಜ್ ಮಾಡಿದ್ದು ತನಿಖೆ ಆಗಬೇಕು.
ಕರ್ನಾಟಕ ಪೊಲೀಸರಿಗೆ ಒಳ್ಳೆಯ ಹೆಸರು ಇದೆ. ಆದ್ರೆ ಹಿರಿಯ ಅಧಿಕಾರಿಗಳು ಕಾನ್ಸ್‌ಟೇಬಲ್ ಗಳ ತರ ವರ್ತನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಿಲ್ಲ. ನಮ್ಮ ಪಕ್ಷದ ನಾಯಕರು ಮಾಡಿದ ಪ್ರಶ್ನೆಗೆ ರಾಜ್ಯ ಸರ್ಕಾರದ ಮಂತ್ರಿಗಳು ಉತ್ತರ ಸಹ ನೀಡಿಲ್ಲ. ಇದು ನಾಚಿಕೆಯ ಸಂಗತಿ ಎಂದು ಹೇಳಿದ್ದಾರೆ.