ಧಾರವಾಡ: ಮೂರು ಲಾರಿಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿ ತುಂಬಿದ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿರುವ ಘಟನೆ ಧಾರವಾಡ ತಾಲೂಕಿನ ಇಟಿಗಟ್ಟಿ ಬಳಿಯ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಟೈಲ್ಸ್ ಹೊತ್ತೊಯ್ಯುತ್ತಿದ್ದ ಲಾರಿ, ಕಾಂಕ್ರೀಟ್ ಮಿಕ್ಸ್ ಲಾರಿ ಹಾಗೂ ಗ್ಯಾಸ್ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿಗಳ ಮಧ್ಯೆ ಸರಣಿ ಅಪಘಾತವಾಗಿದೆ.
ಟೈಲ್ಸ್ ಹಾಗೂ ಕಾಂಕ್ರೀಟ್ ಮಿಕ್ಸ್ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ಹಿಂದೆ ಬರುತ್ತಿದ್ದ ಸಿಲಿಂಡರ್ ಲಾರಿಯು ಟೈಲ್ಸ್ ಲಾರಿಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ. ಲಾರಿಯಲ್ಲಿ ಗ್ಯಾಸ್ ತುಂಬಿದ ಸಿಲಿಂಡರ್ ಇದ್ದ ಕಾರಣ ಸ್ಥಳದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಲಾರಿಯನ್ನು ಮೇಲೆತ್ತುವ ಕೆಲಸ ಮಾಡಿದರು. ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.