ಮುಖ್ಯ ರಸ್ತೆಯ ಪಕ್ಕದಲ್ಲಿರುವ ಅಂಗಡಿಗಳಲ್ಲಿ ಸರಣಿ ಕಳ್ಳತನ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಂಗಳವಾರ ರಾತ್ರಿ ಪಟ್ಟಣದ ಶಿಗ್ಲಿ ನಾಕಾ ಹತ್ತಿರ 3 ಅಂಗಡಿಗಳು ಹಾಗೂ ಲಕ್ಷ್ಮೇಶ್ವರ ನಗರದ ಒಂದು ಮನೆಯ ಕೀಲಿ ಮುರಿದು ಕಳ್ಳತನ ಮಾಡಿರುವ ಘಟನೆಯಿಂದ ಜನತೆ ಬೆಚ್ಚಿ ಬಿದ್ದಿದ್ದಾರೆ.

Advertisement

ಶಿಗ್ಲಿ ನಾಕಾ ಬಳಿ ಇರುವ ಝರಾಕ್ಸ್ ಅಂಗಡಿ, ಅದರ ಪಕ್ಕದಲ್ಲಿ ಮಿಶ್ರಾ ಪೇಡಾ ಅಂಗಡಿ ಹಾಗೂ ಅದೇ ಸಾಲಿನಲ್ಲಿರುವ ಸ್ಟೇಷನರಿ ಅಂಗಡಿ ಇವುಗಳ ಮೇಲಿನ ತಗಡಿನ ಶೀಟ್‌ಗಳನ್ನು ಕತ್ತರಿಸಿ ಒಳಗಡೆ ಇಳಿದು ಈ ಕೃತ್ಯ ನಡೆಸಿದ್ದು, ಅಂಗಡಿಯಲ್ಲಿದ್ದ ಗಲ್ಲಾಪೆಟ್ಟಿಗೆಯಲ್ಲಿನ ಹಣ ಮತ್ತು ಇನ್ನಿತರ ಕೆಲವು ವಸ್ತುಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಬೇಕರಿ ಅಂಗಡಿಗೂ ತಗಡಿನ ಶೀಟ್ ಕತ್ತರಿಸುವ ಪ್ರಯತ್ನ ಮಾಡಿದ್ದು, ಯಾವುದೋ ಕಾರಣಕ್ಕೆ ಬಿಟ್ಟು ಹೋಗಿದ್ದಾರೆ. ಅದೇ ವೇಳೆ ಲಕ್ಷ್ಮೇಶ್ವರ ನಗರದಲ್ಲಿಯೂ ಒಂದು ಮನೆಯ ಬಾಗಿಲು ಮುರಿದು ಮನೆಯಲ್ಲಿನ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿದ್ದಾರೆಂದು ತಿಳಿದು ಬಂದಿದೆ.

ಈ ಕುರಿತಂತೆ ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ ಗಡಾದ, ಕ್ರೈಂ ವಿಭಾಗದ ಪಿಎಸ್‌ಐ ಟಿ.ಕೆ. ರಾಥೋಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳತನದ ದೃಶ್ಯವನ್ನು ಎಲ್ಲ ಅಂಗಡಿಗಳಲ್ಲಿಯ ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ ನಡೆಸಿ, ಸಂಬಂದಿಸಿದ ವಿಡಿಯೋ ತುಣುಕುಗಳನ್ನು ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ. ಝರಾಕ್ಸ್ ಅಂಗಡಿಯಲ್ಲಿ, ಮಿಶ್ರಾ ಪೇಡಾ ಅಂಗಡಿಯಲ್ಲಿ ಹಾಗೂ ಸ್ಟೇಷನರಿ ಅಂಗಡಿಯಲ್ಲಿನ ಗಲ್ಲಾ ಪೆಟ್ಟಿಗೆಯಲ್ಲಿ ಹಣವನ್ನು ಹಾಗೂ ಸಿಹಿ ತಿಂಡಿಗಳನ್ನು, ಕೆಲವು ಅಲಂಕಾರಿಕ ವಸ್ತುಗಳನ್ನು ದೋಚಿದ್ದಾರೆಂದು ತಿಳಿದು ಬಂದಿದೆ.

ಮುಖ್ಯ ರಸ್ತೆಯ ಪಕ್ಕದಲ್ಲಿರುವ ಅಂಗಡಿಗಳಲ್ಲಿಯೇ ಸರಣಿ ಕಳ್ಳತನವಾಗಿರುವದು ಆಶ್ಚರ್ಯ ಮೂಡಿಸಿದೆ. ತಗಡಿನ ಶೀಟ್‌ಗಳನ್ನು ಕೊರೆದು ಒಳಬರುವವರೆಗೆ ಯಾವುದೇ ರೀತಿಯ ಸದ್ದು ಕೇಳಿಸದಂತೆ ಇರುವದು ವಿಚಿತ್ರವೆನಿಸಿದ್ದು, ಪೊಲೀಸರು ಶೀಘ್ರವೇ ಕಳ್ಳರನ್ನು ಪತ್ತೆ ಹಚ್ಚಬೇಕು ಮತ್ತು ಪ್ರಮುಖ ಸ್ಥಳಗಳಲ್ಲಿ ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಬೇಕು ಎಂದು ಯುವ ಮುಖಂಡ ನಾಗರಾಜ ಪಿಳ್ಳಿ ಆಗ್ರಹಿಸಿದ್ದಾರೆ.

 


Spread the love

LEAVE A REPLY

Please enter your comment!
Please enter your name here