ಬೆಂಗಳೂರು: ಮದುವೆ ಮನೆಗಳಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಕುಖ್ಯಾತ ಆರೋಪಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಬಾಬು ಅಲಿಯಾಸ್ ಪಲ್ಸರ್ ಬಾಬು ಬಂಧಿತ ಆರೋಪಿಯಾಗಿದ್ದು, ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ರೆಡ್‌ಹ್ಯಾಂಡ್ ಆಗಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಮದುವೆ ಮನೆಗಳಲ್ಲಿ ಜನರ ಗಮನ ಬೇರೆಡೆ ಇರುವಾಗ, ವಿಶೇಷವಾಗಿ ಚಿಕ್ಕ ಮಕ್ಕಳನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ, ಮೊಬೈಲ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದುಕೊಂಡು ಪರಾರಿಯಾಗುತ್ತಿದ್ದನು. ಇದಲ್ಲದೆ, ಕ್ಯಾಮೆರಾ, ಲ್ಯಾಪ್‌ಟಾಪ್ ಹಾಗೂ ಬೈಕ್‌ಗಳನ್ನೂ ಕಳ್ಳತನ ಮಾಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿ ದೊಡ್ಡ ದೊಡ್ಡ ಮದುವೆ ಛತ್ರಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದು, ಇಂತಹ ರೀತಿಯಲ್ಲಿ ಬರೋಬ್ಬರಿ 19 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಐಷಾರಾಮಿ ಜೀವನ ಮತ್ತು ಮೋಜುಮಸ್ತಿಗಾಗಿ ಕಳ್ಳತನ ನಡೆಸುತ್ತಿದ್ದ ಆತ ಪದೇಪದೇ ಜೈಲಿಗೆ ಹೋಗಿ ಬರುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಕದ್ದ ಚಿನ್ನಾಭರಣಗಳನ್ನು ಕರಗಿಸಿ ತಿರುಪತಿ ಲಾಕೆಟ್ ಹಾಗೂ ಉಂಗುರಗಳ ರೂಪದಲ್ಲಿ ತಯಾರಿಸಿಕೊಂಡು ಬಳಸುತ್ತಿದ್ದನು. ಕಳ್ಳತನದಿಂದ ಬಂದ ಹಣದಲ್ಲಿ ಕಾರುಗಳನ್ನು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದನೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಸದ್ಯ ಆರೋಪಿಯಿಂದ ಒಟ್ಟು 42.38 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 2 ಕಾರುಗಳು, 132 ಗ್ರಾಂ ಚಿನ್ನಾಭರಣ, 7 ಮೊಬೈಲ್‌ಗಳು, 1 ಕ್ಯಾಮೆರಾ, 2 ಲೆನ್ಸ್‌ಗಳು, 2 ಲ್ಯಾಪ್‌ಟಾಪ್‌ಗಳು, 1.20 ಲಕ್ಷ ನಗದು ಹಾಗೂ 4 ಬೈಕ್‌ಗಳು ಸೇರಿವೆ.
ಪಲ್ಸರ್ ಬಾಬು ಬಂಧನದಿಂದ ಸದಾಶಿವನಗರ, ವರ್ತೂರು, ಜಾಲಹಳ್ಳಿ, ಹೆಣ್ಣೂರು ಮತ್ತು ಬಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ 8 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.



