ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಅಗಡಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಹಾಶಿವರಾತ್ರಿಯ ದಿನದಂದು ಶ್ರೀ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆಗಾಗಿ ಸಿದ್ಧಗೊಂಡಿರುವ 5 ಸಾವಿರ ಶಿವಲಿಂಗಗಳನ್ನು ಶುಭ್ರಗೊಳಿಸಿ ಪೂಜೆ ಸಲ್ಲಿಸುವ ಸೇವಾ ಕಾರ್ಯದ ಮೂಲಕ ಶ್ರದ್ಧಾ-ಭಕ್ತಿಯಿಂದ ಶಿವರಾತ್ರಿ ಹಬ್ಬದಲ್ಲಿ ಪಾಲ್ಗೊಂಡರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಪರಶುರಾಮ ಬಾರ್ಕಿ ಮಾರ್ಗದರ್ಶನ ಮತ್ತು ಎನ್ಎಸ್ಎಸ್ ಘಟಕದ ಅಧಿಕಾರಿ ಪ್ರೊ. ಸೋಮಶೇಖರ ಕೆರಿಮನಿ ಅವರ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಧರ್ಮಕ್ಷೇತ್ರಕ್ಕೆ ಆಗಮಿಸಿ ಶಿವಲಿಂಗಗಳನ್ನು ನೀರಿನಿಂದ ಶುಭ್ರಗೊಳಿಸಿ ವಿಭೂತಿ ಲೇಪಿಸಿ, ಪುಷ್ಪ, ಬಿಲ್ವಪತ್ರೆಗಳಿಂದ ಅಲಂಕರಿಸಿದರು. ಪೂಜಿತಗೊಂಡ ಶಿವಲಿಂಗಗಳನ್ನು ಆಗಮಿಸಿದ ಅಪಾರ ಭಕ್ತರು ಸ್ಪರ್ಶಿಸಿ ಭಕ್ತಿಯಿಂದ ನಮಿಸಿದರು.
ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಪ್ರೊ. ವಿಕ್ರಂ ಶಿರೋಳ, ಡಾ. ಅರುಣ ಕುಂಬಿ, ಪ್ರೊ. ಶಿವಲಿಂಗಪ್ಪ ಡಿ.ಆರ್, ಪ್ರೊ. ಷಣ್ಮುಖ ಗಡ್ಡೆಣ್ಣವರ, ಸೋಮು ನವಲಗುಂದ, ರವಿ ದುರಗಣ್ಣವರ, ಪ್ರೊ. ನವೀನ, ಮಂಜುನಾಥ್ ಸಾತಪುತೆ, ಸಿಬ್ಬಂದಿಗಳ ಸೇರಿ ಅನೇಕ ವಿದ್ಯಾರ್ಥಿಗಳು ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಶಿವರಾತ್ರಿ ದಿನ ಧರ್ಮಕ್ಷೇತ್ರದಲ್ಲಿನ ಶಿವಲಿಂಗಗಳನ್ನು ಶುಭ್ರಗೊಳಿಸಿ ಪೂಜಿಸಲಾಗುತ್ತದೆ. ಈ ದಿನ ಉಪವಾಸ ವ್ರತಾಚರಣೆಯೊಂದಿಗೆ ಶಿವಲಿಂಗ ಪೂಜಾ ಸೇವೆ ಮಾಡುವುದು ತಮ್ಮ ಭಾಗ್ಯವೆಂದು ಕಾಲೇಜಿನ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.
ಪ್ರತಿ ವರ್ಷ ಶಿವರಾತ್ರಿ ಹಬ್ಬದ ದಿನ ಅಗಡಿ ಇಂಜಿನಿಯರಿಂಗ್ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಸ್ವಯಂ ಪ್ರೇರಣೆ ಮತ್ತು ಭಕ್ತಿಯಿಂದ ಕ್ಷೇತ್ರದಲ್ಲಿನ ಸಾವಿರಾರು ಶಿವಲಿಂಗಗಳಿಗೆ ಜಲಪ್ರೋಕ್ಷಣೆ ಮಾಡಿ ಅಲಂಕರಿಸುವ ಮೂಲಕ ಶಿವರಾತ್ರಿ ಜಾತ್ರಾಮಹೋತ್ಸವಕ್ಕೆ ಜೀವಕಳೆ ನೀಡುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶ್ರೀಗಳು ಹೇಳಿದರು.
ಶಿವರಾತ್ರಿಯ ನಿಮಿತ್ತ ಅಪಾರ ಭಕ್ತರು ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಆಗಮಿಸಿ ಲಿಂ. ವೀರಗಂಗಾಧರ ಜಗದ್ಗುರುಗಳ ಕೃತ ಗದ್ದುಗೆ, ಶಿವಲಿಂಗ ದರ್ಶನ ಮತ್ತು ಕ್ಷೇತ್ರದ ಪಟ್ಟಾಧ್ಯಕ್ಷರ ದರ್ಶನಾಶೀರ್ವಾದ ಪಡೆದರು.



