ವಿಜಯಸಾಕ್ಷಿ ಸುದ್ದಿ, ಗದಗ: ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಮೂಲಕ ಜನಮುಖಿಯಾಗಿ ಕಾರ್ಯ ಮಾಡುತ್ತಿರುವ ಔಷಧ ವ್ಯಾಪಾರಿಗಳ ಸೇವೆ ಅನುಪಮವಾದದ್ದು ಎಂದು ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಘುನಾಥ ರೆಡ್ಡಿ ಹೇಳಿದರು.
ಅವರು ಗುರುವಾರ ಎಸ್.ಬಿ.ಎಸ್ ಗಾರ್ಡನ್‌ನಲ್ಲಿ ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘ ಬೆಂಗಳೂರು, ಗದಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಏರ್ಪಡಿಸಿದ್ದ `ವಿಶ್ವ ಔಷಧ ತಜ್ಞರ ದಿನಾಚರಣೆ’, ನಿರಂತರ ಕಲಿಕಾ ಕಾರ್ಯಕ್ರಮ ಮತ್ತು ಹಿರಿಯ ಔಷಧ ತಜ್ಞರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಔಷಧ ತಜ್ಞರಿಗೆ ಮುಖ್ಯವಾಗಿ ತಾಳ್ಮೆ, ಸಹನೆ, ಮಾನವೀಯತೆ ಹಾಗೂ ಸಹಕಾರ ಮನೋಭಾವ ಇರುವದು ಅವಶ್ಯ. ಇಂತಹ ಗುಣಗಳುಳ್ಳ ವ್ಯಕ್ತಿ ಖ್ಯಾತಿಯನ್ನು ಮತ್ತು ಸಂತೃಪ್ತಿಯನ್ನು ಹೊಂದಬಲ್ಲ ಎಂದರು.
ಹುಬ್ಬಳ್ಳಿಯ ಪ್ರಾದೇಶಿಕ ಕಚೇರಿಯ ಉಪ ಔಷಧ ನಿಯಂತ್ರಕ ಬಸವರಾಜ ಆಸಂಗಿ ಮಾತನಾಡಿ, ಫಾರ್ಮಾಸಿಸ್ಟ್ಗಳ ಕಾರ್ಯ ಶ್ಲಾಘನೀಯ. 24 ಗಂಟೆಯೂ ನಿರಂತರವಾಗಿ ಸೇವೆ ಮಾಡುತ್ತ ಜನರ ಆರೋಗ್ಯ, ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿರುವದು ಅಭಿನಂದನೀಯ ಎಂದರು.
ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ವಿ.ಕೆ. ಜೀವನ್ ಮಾತನಾಡಿ, ಇಂದಿನ ದಿನಗಳು ಸ್ಪರ್ಧಾತ್ಮಕ ದಿನಗಳಾಗಿದ್ದು, ಫಾರ್ಮಾಸಿಸ್ಟ್ಗಳು ತಮ್ಮ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ನೀಡುವ ಮೂಲಕ ತಮ್ಮ ವೃತ್ತಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶಗಳಿವೆ ಎಂದರು.
ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ತಾತನಗೌಡ ಪಾಟೀಲ ಮಾತನಾಡಿ, ಗದಗ ಜಿಲ್ಲೆಯಲ್ಲಿ ಔಷಧ ವ್ಯಾಪಾರಿಗಳ ಸಂಘಟನೆ ಉತ್ತಮವಾಗಿ ಬೆಳೆದು ಬಂದಿದ್ದು, ಗದಗದಲ್ಲಿ ಉದ್ದೇಶಿತ ‘ಔಷಧ ಭವನ’ ನಿರ್ಮಾಣಕ್ಕೆ ರಾಜ್ಯ ಸಂಘಟನೆಯಿಂದ 3 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲು ಅವಕಾಶವಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಾಮನಗೌಡ ದಾನಪ್ಪಗೌಡ್ರ ಮಾತನಾಡಿ, ಗದಗದಲ್ಲಿ ಔಷಧ ಭವನ ನಿರ್ಮಾಣಕ್ಕೆ ಭೂಮಿಯನ್ನು ಗುರುತಿಸಲಾಗಿದ್ದು, ದಾನಿಗಳ ಸಹಕಾರದೊಂದಿಗೆ ಈ ಕಾರ್ಯ ಪೂರ್ಣಗೊಳಿಸುವದಾಗಿ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶಿರೋಳ, ಭೈರನಹಟ್ಟಿಯ ತೋಂಟದಾರ್ಯ ಶಾಖಾ ಮಠದ ಪೂಜ್ಯ ಶಾಂತಲಿಲಿಂಗ ಮಹಾಸ್ವಾಮಿಗಳು ಮಾತನಾಡಿ, ಜನಸಾಮಾನ್ಯರ ದೃಷ್ಟಿಯಲ್ಲಿ ಔಷಧ ವ್ಯಾಪಾರಿಗಳೇ ವೈದ್ಯರು. ನಿತ್ಯದ ಕಾಯಕದಿಂದ ನೈಪುಣ್ಯತೆ ಬೆಳೆಸಿಕೊಂಡಿದ್ದಾರೆ ಎಂದರು.
ಅತಿಥಿಗಳಾಗಿ ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಗದಗ ಜಿಲ್ಲಾ ಪ್ರತಿನಿಧಿ ಮಾಲತೇಶ ರಮಾಣಿ, ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘ ಸದಸ್ಯ ಮಹಾದೇವಗೌಡ ಲಿಂಗನಗೌಡ್ರ, ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಬಿ.ಮಂಜುನಾಥ ರೆಡ್ಡಿ ಪಾಲ್ಗೊಂಡಿದ್ದರು.
ಹಿರಿಯ ಔಷಧ ತಜ್ಞರಾದ ರಾಧಾ ದೀಪಾಲಿ, ಹನಮಂತಗೌಡ ಪಾಟೀಲ, ಮಲ್ಲಪ್ಪ ಕಾಬಳ್ಳಿ, ನಿಂಗಪ್ಪ ದೇಸಾಯಿ, ರಾಜಣ್ಣ ತ್ರಿಮಲ್ಲೆ, ಈರಣ್ಣ ಕಪ್ಪರಶೆಟ್ಟಿ, ಪಂಚಾಕ್ಷರಪ್ಪ ಅಂಗಡಿ, ರವೀಂದ್ರನಾಥ ಆನೇಗುಂದಿ, ರಮಜಾನ್‌ಸಾಹೇಬ ನದಾಫ್, ಸುನೀಲ ಪತ್ತೇಪೂರ, ಭೀಮರೆಡ್ಡೆಪ್ಪ ಪರಡ್ಡಿ, ಮಲ್ಲಿಕಾರ್ಜುನ ನರೇಗಲ್ಲ, ಸುರೇಶ ನವಲಿ, ವೀರಭದ್ರಪ್ಪ ಪಾಗಿ, ಸಂಗಪ್ಪ ಹೂಗಾರ, ಜಗನ್ನಾಥ ಅಳವಂಡಿ, ಅನುಷಾ ಕುಲಕರ್ಣಿ, ಪವನ ನರಗುಂದ, ತೋಟಪ್ಪ ಹಾವೇರಿ, ಬಸಯ್ಯ ಮಠಪತಿ, ಶಿವರುದ್ರಪ್ಪ ಮಲ್ಲಾಡದ ಅವರನ್ನು ದಂಪತಿ ಸಮೇತ ಸನ್ಮಾನಿಸಲಾಯಿತು.
ಮಹೇಶ ಕುಂದ್ರಾಳಹಿರೇಮಠ, ಬಸವರಾಜ ದೊಡ್ಡಮನಿ, ಖಾಜೇಸಾಬ ಬೂದಿಹಾಳ ಪ್ರಾರ್ಥಿಸಿದರು. ನಾಗೇಶ ಹುಬ್ಬಳ್ಳಿ ಸ್ವಾಗತಿಸಿದರು. ಮಹಾಂತೇಶ ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬಾಹುಬಲಿ ಜೈನರ್ ನಿರೂಪಿಸಿದರು. ಕಾರ್ಯದರ್ಶಿ ಜ್ಞಾನೇಶ್ವರ ಖೋಕಲೆ ವಂದಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಮಾತನಾಡಿ, ಔಷಧ ತಜ್ಞರು ಜನಸಾಮಾನ್ಯರ ದೃಷ್ಟಿಯಲ್ಲಿ ವೈದ್ಯರಾಗಿದ್ದಾರೆ. ಆರೋಗ್ಯದ ಸಣ್ಣ ಪುಟ್ಟ ಸಮಸ್ಯೆಗಳಿಗೆ ಔಷಧ ನೀಡಿ ಜನರ ಆರೋಗ್ಯ ಕಾಪಾಡುತ್ತಾರೆ. ಆದಾಗ್ಯೂ, ತಜ್ಞ ವೈದ್ಯರ ಸಲಹೆ ಅಗತ್ಯ ಎಂದರು.