ವಿಜಯಸಾಕ್ಷಿ ಸುದ್ದಿ, ಗದಗ: ಸಾರ್ವಜನಿಕ ರಂಗದಲ್ಲಿ ಸೇವೆ ಸಲ್ಲಿಸುವು ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅಂತಹ ಭಾಗ್ಯ ನನಗೆ ಸಿಕ್ಕಿದೆ. ನನ್ನ ಜೊತೆಗೆ ಯಾವಾಗಲೂ ಆತ್ಮೀಯ ಸ್ನೇಹಿತರ ಸಹಕಾರ ಮತ್ತು ಸೇವಾ ಮನೋಭಾವ ಇರುವುದರಿಂದ ಸಾರ್ವಜನಿಕ ರಂಗದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದು ಯುವ ಮುಖಂಡ ವಸಂತ ಪಡಗದ ಹೇಳಿದರು.
ನಗರದ ಹಳೇ ಬಸ್ ನಿಲ್ದಾಣ ರಸ್ತೆಯಲ್ಲಿರುವ ವಾಡಿಯಾ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ತಮ್ಮ 38ನೇ ಜನ್ಮದಿನದ ನಿಮಿತ್ತ ವಸಂತ ಪಡಗದ ಅಭಿಮಾನಿ ಬಳಗ, ಅಂಬಿಕಾ ರಕ್ತನಿಧಿ ಹಾಗೂ ಬಾಲವಿನಾಯಕ ರಕ್ತದಾನ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನ ಮಾಡುವುದರಿಂದ ರಕ್ತದೊತ್ತಡ ಕಡಿಮೆಯಾಗುವುದು ಸೇರಿದಂತೆ ಹಲವಾರು ಉಪಯೋಗಗಳಿದ್ದು, ಅದರೊಟ್ಟಿಗೆ, ಆತ್ಮತೃಪ್ತಿ ಕೂಡಾ ಸಿಗುತ್ತದೆ. ಪ್ರತಿಯೊಬ್ಬರು ರಕ್ತದಾನ ಮಾಡಬೇಕು ಎಂದು ಹೇಳಿದರು.
ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಶದಲ್ಲಿ ಪ್ರತಿವರ್ಷ 41 ದಶಲಕ್ಷ ಯುನಿಟ್ ರಕ್ತದ ಕೊರತೆ ಎದುರಾಗುತ್ತಿದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳುಗಳು ಮೃತಪಡುತ್ತಿದ್ದಾರೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತಿ ಅಗತ್ಯವಾಗಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದರು.
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದಣ್ಣ ಪಲ್ಲೇದ ಮಾತನಾಡಿ, ಜನಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿದ್ದು, ಅವುಗಳನ್ನು ಹೋಗಲಾಡಿಸಬೇಕು. ಹೆಚ್ಚು ಜನರು ಸೇರುವ ಧಾರ್ಮಿಕ ಕೇಂದ್ರಗಳಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರ ಆಯೋಜಿಸಿದರೆ ದೇಶದಲ್ಲಿನ ರಕ್ತದ ಕೊರತೆ ನೀಗಿಸಬಹುದು. ಪ್ರತಿಯೊಬ್ಬರೂ ರಕ್ತದಾನಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದರು.
ಇನ್ನೊಬ್ಬ ಯುವ ಮುಖಂಡ ವಿನೋದ ಮೊರಬದ ಮಾತನಾಡಿ, ಒಬ್ಬರ ರಕ್ತದಾನದಿಂದ ಮೂವರ ಪ್ರಾಣ ಉಳಿಸಬಹುದು. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಮನುಷ್ಯ ದಾನ ಮಾಡಿದರಷ್ಟೇ ರಕ್ತದ ಉತ್ಪಾದನೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಸಂತ ಪಡಗದ ಅಭಿಮಾನಿ ಬಳಗದ ಶರಣು ಮರಿಗೌಡರ, ಜಯಪ್ಪ ಕುರ್ತಕೋಟಿ, ಮಂಜುನಾಥ ರಾಯಚೂರು, ಮೋಹನ ವರವಿ, ಮುತ್ತಣ್ಣ ಪಡಗದ, ಸಂಗಪ್ಪ ದೊಡ್ಡಣ್ಣವ್ವರ, ಕುಮಾರ ಕಣವಿ, ಪ್ರವೀಣ ಕರಿಬಿಷ್ಠಿ, ಷಣ್ಮುಖ, ಅರುಣ ಹೊಂಬಾಳಿ, ಬಸವರಾಜ ತುಪ್ಪದ, ಪಂಚಾಕ್ಷರಿ ಅಂಗಡಿ, ಮಹೇಶ ಗಾಣಿಗೇರ, ಸಂಗಪ್ಪ ಚಿತ್ತರಗಿ, ರಜತ್ ಭೀಮಕರ ಮುಂತಾದವರು ಹಾಜರಿದ್ದರು.
ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿರುವ ಮಾತೃ ಮಿಲನ ಸಂಸ್ಥೆಯ ವೃದ್ಧಾಶ್ರಮದಲ್ಲಿನ 20 ಜನರಿಗೆ ಊಟ ನೀಡುವ ಮೂಲಕ ಕೆಲಕಾಲ ವೃದ್ಧಾಶ್ರಮದಲ್ಲಿರುವವರೊಂದಿಗೆ ಕಾಲ ಕಳೆದರು. ಬೆಟಗೇರಿ ಮಂಜು ಶಿಕ್ಷಣ ಸಂಸ್ಥೆಯ ವಿಕಲಚೇತನ ಮಕ್ಕಳ ಶಾಲೆಯಲ್ಲಿನ 100ಕ್ಕೂ ಅಧಿಕ ಮಕ್ಕಳೊಂದಿಗೆ ಬೆರೆತು ಅತ್ಯಂತ ಸರಳವಾಗಿ ಅರ್ಥಪೂರ್ಣವಾಗಿ ವಸಂತ ಪಡಗದ ಅಭಿಮಾನಿಗಳು ಜನ್ಮದಿನವನ್ನು ಆಚರಿಸಿದರು.
ಗದಗ ನಗರದಲ್ಲಿನ ಪ್ರಾಥಮಿಕ ಶಾಲೆ ನಂ. 2 ಮತ್ತು 3ರಲ್ಲಿನ ಮಕ್ಕಳಿಗೆ ನೋಟ್‌ಬುಕ್, ಡ್ರಾಯಿಂಗ್ ಮಟೀರಿಯಲ್ ಹಾಗೂ ಬಿಸ್ಕೆಟ್ ಹೊಂದಿರುವ 200 ಕಿಟ್‌ಗಳನ್ನು ವಿತರಿಸಲಾಯಿತು. ವಸಂತ ಪಡಗದ ಅಭಿಮಾನಿ ಬಳಗದ ವತಿಯಿಂದ ಅವರ ಜನ್ಮದಿನದ ಅಂಗವಾಗಿ ಹೊರತಂದಿರುವ 2026ನೇ ಸಾಲಿನ ನೂತನ ದಿನದರ್ಶಿಕೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ ದ್ಯಾವನೂರ, ಮೋಹನ ವರವಿ, ವಿಶ್ವನಾಥ ಸೇರಿದಂತೆ ಪಡಗದ ಅವರ ಅಭಿಮಾನಿಗಳು ಹಾಜರಿದ್ದರು.



