ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಬಯಲು ಸೀಮೆಯ ಒಣ ಬೇಸಾಯದ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ನಿಗದಿಪಡಿಸಿ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ರೈತ ಮುಖಂಡ ಗಿರೀಶ ವಿರೂಪಾಕ್ಷಪ್ಪ ಹೆಗ್ಗಡದಿನ್ನಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರ ಕೇವಲ ಕಬ್ಬು ಬೆಳೆಯುವ ರೈತರ ಬಗ್ಗೆ ಮಾತ್ರ ಮಾತನಾಡುತ್ತಿದೆ. ಆದರೆ ಇತರೆ ಬೆಳೆಗಾರರನ್ನು ನಿರ್ಲಕ್ಷಿಸುತ್ತಿದೆ. ಗದಗ ಜಿಲ್ಲೆ ಸೇರಿದಂತೆ ಉತ್ತರಕರ್ನಾಟಕದ ಬಹುತೇಕ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಮುಂಗಾರಿನ ಅತಿವೃಷ್ಟಿಯಲ್ಲಿ ಸಿಲುಕಿ ಪರದಾಡುತ್ತಿರುವ ರೈತರಿಗೆ ಸೂಕ್ತ ದರ ಸಿಕ್ಕಿಲ್ಲ. ಪ್ರತಿ ವರ್ಷ ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಕ್ವಿಂಟಾಲ್ ಗೆ ರೂ. 2200ಕ್ಕೂ ಹೆಚ್ಚು ಬೆಲೆ ನೀಡುತ್ತಿದ್ದರು. ಆದರೆ ಈ ಬಾರಿ ರೈತರು ಸೂಕ್ತ ದರ ಸಿಗದ ಕಾರಣ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಗೆ ಕೇವಲ ರೂ. 1700ಗೆ ಕೊಡುವ ಮೂಲಕ ಕೈಸುಟ್ಟುಕೊಂಡಿದ್ದಾರೆ.
ಆದ್ದರಿಂದ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್ ಗೆ ರೂ. 2400ಕ್ಕಿಂತ ಹೆಚ್ಚಿನ ದರ ನಿಗದಿಪಡಿಸಬೇಕು ಮತ್ತು ಆದಷ್ಟು ಬೇಗ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.


