ಗುರಿ ನಿಗದಿಪಡಿಸಿ ಪ್ರಗತಿ ಸಾಧಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ್ ಅಧ್ಯಕ್ಷತೆಯಲ್ಲಿ ಧಾರವಾಡ ಜಿ.ಪಂ ಸಭಾಂಗಣದಲ್ಲಿ ಗುರುವಾರ ಎಲ್ಲಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

Advertisement

ಗ್ರಾ.ಪಂಗಳ ವಿದ್ಯುತ್ ಬಿಲ್ ಬಾಕಿ ಮರು ಹೊಂದಾಣಿಕೆ, ಸ್ವಚ್ಛ ಭಾರತ ಮಿಷನ್, ಸಕಾಲ, ಸಾರ್ವಜನಿಕ ಕುಂದುಕೊರತೆ, ತೆರಿಗೆ ವಸೂಲಾತಿ, ವಸತಿ ಯೋಜನೆ, 15ನೇ ಹಣಕಾಸು, ಮಹಾತ್ಮ ಗಾಂಧಿ ನರೇಗಾ ಯೋಜನೆ, ಸಾಮಾಜಿಕ ಲೆಕ್ಕ ಪರಿಶೋಧನೆ, ಬೂದು ನೀರು ನಿರ್ವಹಣೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಜಿ.ಪಂ ಸಿಇಓ ಭುವನೇಶ್ ಪಾಟೀಲ್ ಮಾತನಾಡಿ, ಬಾಕಿ ಕರ ವಸೂಲಾತಿ ಪ್ರಗತಿ ಕುಂಠಿತವಾಗಿದ್ದು, ಪ್ರತಿ ತಿಂಗಳು ಶೇ.10ರಷ್ಟು ಗುರಿ ನಿಗದಿಪಡಿಸಿಕೊಂಡು ಪ್ರಗತಿ ಸಾಧಿಸಬೇಕು. ಜಿಲ್ಲೆಯಲ್ಲಿ ಗ್ರಂಥಾಲಯ ಉಪಕರ ವಸೂಲಾತಿ ಪ್ರಗತಿ ಕುಂಠಿತವಾಗಿದ್ದು, ಪ್ರತಿ ತಿಂಗಳು ಶೇ.10ರಷ್ಟು ಗುರಿ ನಿಗದಿಪಡಿಸಿಕೊಂಡು ಪ್ರಗತಿ ಸಾಧಿಸಬೇಕು.  ಇ-ಗ್ರಾಮಸ್ವರಾಜ್ ತಂತ್ರಾಂಶದಲ್ಲಿ ಅನುಮೋದಿತ ಕ್ರಿಯಾ ಯೋಜನೆಯನ್ನು ಅಳವಡಿಸುವುದು, ಇ-ಸ್ವತ್ತು 30 ದಿನಗಳಿಗಿಂತ ಹೆಚ್ಚು ಕಾಲ ವಿಲೇವಾರಿಯಾಗದೇ ಬಾಕಿ ಉಳಿಸಿಕೊಂಡಿದ್ದು ಈ ಕುರಿತು ಕ್ರಮ ವಹಿಸಬೇಕೆಂದು ಸೂಚಿಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ 2025-26ನೇ ಸಾಲಿನ ವಾರ್ಷಿಕ ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸದೇ ಕನಿಷ್ಠ ಪ್ರಗತಿ ಸಾಧಿಸಿರುವ ಗ್ರಾ.ಪಂಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಕೂಲಿಕಾರರಿಗೆ ಸ್ಥಳೀಯವಾಗಿ ಕೆಲಸ ಒದಗಿಸಿ ಪ್ರಗತಿ ಸಾಧಿಸಬೇಕು. ಮಹಿಳಾ ಭಾಗವಹಿಸುವಿಕೆ ಪ್ರಮಾಣವನ್ನು ಸರಕಾರದಿಂದ ನಿಗದಿಪಡಿಸಿದ ಶೇ.50ರಷ್ಟು ಗುರಿ ಸಾಧಿಸಲು ಹಾಗೂ ಬೂದು ನೀರು ನಿರ್ವಹಣೆ ಕಾಮಗಾರಿಗಳ ಡಿಪಿಆರ್‌ಗಳನ್ನು ತಯಾರಿಸಿ ಸಲ್ಲಿಸಲು ಮತ್ತು ಜಿಲ್ಲೆಯಲ್ಲಿ ದಾಖಲಾಗಿರುವ ಸಾಮಾಜಿಕ ಲೆಕ್ಕ ಪರಿಶೋಧನಾ ಆಕ್ಷಪಣೆ ಮತ್ತು ವಸೂಲಾತಿ ಮಾಡಿ ಇತ್ಯರ್ಥಪಡಿಸಲು ಸಿಇಓ ಭುವನೇಶ್ ಪಾಟೀಲ್ ಸೂಚಿಸಿದರು.

ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಮುಖ್ಯ ಯೋಜನಾ ಅಧಿಕಾರಿ ದೀಪಕ್ ಮಡಿವಾಳ, ಪಿಆರ್‌ಇಡಿ ಕಾರ್ಯಪಾಲಕ ಅಭಿಯಂತರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸ್ವಚ್ಚ ಭಾರತ ಮಿಷನ್ (ಗ್ರಾ) ಯೋಜನೆಯಡಿ ವೈಯಕ್ತಿಕ ಶೌಚಾಲಯ ಹಾಗೂ ಸಮುದಾಯ ಶೌಚಾಲಯ ನಿರ್ಮಾಣ ಮಾಡಲು ಕಾರ್ಯಾದೇಶ ನೀಡಿದ ಫಲಾನುಭವಿಗಳು ತುರ್ತಾಗಿ ಶೌಚಾಲಯ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.


Spread the love

LEAVE A REPLY

Please enter your comment!
Please enter your name here