ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ನಕಲಿ ಠರಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ-ಬೆಟಗೇರಿ ನಗರಸಭೆಯ ಮೂವರು ಬಿಜೆಪಿ ಸದಸ್ಯರ ಅಮಾನತು ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ನಕಲಿ ಠರಾವು ಸೃಷ್ಟಿಸಿ ಸಾವಿರಾರು ಕೋಟಿ ರೂ ಬೆಲೆಬಾಳುವ 34 ಎಕರೆ ವಕಾರಸಾಲು ಲೀಸ್ ಅವಧಿ ವಿಸ್ತರಣೆ ವಿಷಯವಾಗಿ ಕೈಗೊಂಡ ಠರಾವು ನಕಲಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮೂವರು ಸದಸ್ಯರನ್ನು ಅಮಾನತು ಮಾಡಿ ಆದೇಶಿಸಿದ್ದರು.
ಅಮಾನತು ಆದೇಶ ಪ್ರಶ್ನಿಸಿ ಮೂವರು ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಧಾರವಾಡ ಪೀಠದಲ್ಲಿದ್ದ ಈ ಮಹತ್ವದ ಪ್ರಕರಣವನ್ನು ಮಂಗಳವಾರ ಬೆಂಗಳೂರಿನ ಹೈಕೋರ್ಟ್ ಪೀಠದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಯಿತು. ಸಮಗ್ರ ವಿಚಾರಣೆ ನಡೆಸಿದ ಹೈಕೋರ್ಟ್, ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟೆಣ್ಣವರ ನೀಡಿರುವ ಆದೇಶವನ್ನು ಎತ್ತಿ ಹಿಡಿಯಿತಲ್ಲದೆ, ಬಿಜೆಪಿಯ ಅಧಿಕಾರದ ಕನಸಿನ ಬಣ್ಣ ಅಳಿಸಿದೆ.
ಈ ನಕಲಿ ದಾಖಲೆಗಳಲ್ಲಿ ಪೌರಾಯುಕ್ತರ ಸಹಿಯನ್ನು ನಕಲು ಮಾಡಿ, ಆರೋಪಿತ ಸದಸ್ಯರು ಸಹಿ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಎಸ್.ಬಿ. ಶೆಟ್ಟೆಣ್ಣವರ, 2025 ಫೆಬ್ರವರಿ 13ರಂದು ನಗರಸಭೆ ಬಿಜೆಪಿ ಸದಸ್ಯರಾದ ಉಷಾ ದಾಸರ, ಅನಿಲ ಅಬ್ಬಿಗೇರಿ ಮತ್ತು ಗೂಳಪ್ಪ ಮುಷಿಗೇರಿ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಆದೇಶಿಸಿದ್ದರು.
ಗದಗ-ಬೆಟಗೇರಿ ನಗರಸಭೆಯ ರಾಜಕೀಯ ಇತಿಹಾಸದಲ್ಲಿ ಬಿಜೆಪಿಗೆ 2ನೇ ಅವಧಿ ಯಾವಾಗಲೂ ಮರೀಚಿಕೆಯಾಗಿಯೇ ಉಳಿದಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಗದಗ-ಬೆಟಗೇರಿ ನಗರಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ 2008ರಲ್ಲಿ ಬಿಜೆಪಿ ಅಧಿಕಾರಕ್ಕೇರಿ 30 ತಿಂಗಳು ಆಡಳಿತ ನಡೆಸಿತ್ತು. ಆದರೆ 2ನೇ ಅವಧಿಯ ವೇಳೆ ಕಾಂಗ್ರೆಸ್ನ ಶಿವಣ್ಣ ಮುಳಗುಂದ ಅವರು 6 ಜನ ಬಿಜೆಪಿ ಸದಸ್ಯರನ್ನೇ ಸೆಳೆದುಕೊಂಡು ಅಧಿಕಾರ ಹೈಜಾಕ್ ಮಾಡಿದ್ದರು. ಸದ್ಯ 2022ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿ ಮೊದಲ ಅವಧಿಯನ್ನು ಪೂರೈಸಿತು. ಆದರೆ 2ನೇ ಅವಧಿ ವೇಳೆಗೆ ಈ ನಕಲಿ ಠರಾವು ಪ್ರಕರಣದಿಂದಾಗಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವಂತಾಯಿತು.
ಬಿಜೆಪಿಯ ಮೂವರು ಸದಸ್ಯರು ನಡೆಸುತ್ತಿರುವ ಕಾನೂನು ಹೋರಾಟದಲ್ಲಿ ಸತತವಾಗಿ ಹಿನ್ನೆಡೆ ಅನುಭವಿಸುತ್ತಲೇ ಬಂದಿದ್ದಾರೆ. ನಕಲಿ ಠರಾವು ವಿಷಯವಾಗಿ ದಾಖಲಾಗಿದ್ದ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಈಗ ಮತ್ತೊಮ್ಮೆ ಹೈಕೋರ್ಟ್ ಏಕಸದಸ್ಯ ಪೀಠದ ಈ ಆದೇಶವು ಬಿಜೆಪಿಗೆ ದೊಡ್ಡ ಹೊಡೆತ ನೀಡಿದ್ದರೂ, ಕಾನೂನು ಹೋರಾಟ ಇಲ್ಲಿಗೆ ಅಂತ್ಯಗೊಂಡಿಲ್ಲ. ಏಕಸದಸ್ಯ ಪೀಠದ ಈ ತೀರ್ಪನ್ನು ಪ್ರಶ್ನಿಸಿ ಬಿಜೆಪಿ ಸದಸ್ಯರು ಹೈಕೋರ್ಟ್ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ. ಆ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರದಿದ್ದರೂ, ಇನ್ನುಳಿದ ಅವಧಿಗೆ ಕಾಂಗ್ರೆಸ್ ಅಧಿಕಾರಕ್ಕೆ ಏರದಂತೆ ಹೋರಾಟ ನಡೆಸುವ ಚಿಂತನೆಯಲ್ಲಿದೆ ಎನ್ನಲಾಗಿದೆ.
ಬೆಳಗಾವಿ ಪ್ರಾದೇಶಿಕ ಆಯುಕ್ತರು ಮೂವರು ಸದಸ್ಯರನ್ನು ಅಮಾನತು ಮಾಡಿರುವ ಪ್ರಕರಣದ ಜೊತೆಗೆ, ನ್ಯಾಯಾಲಯದ ಆದೇಶವನ್ನು ಮೀರಿ ಚುನಾವಣಾ ಅಧಿಕಾರಿಗಳು ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸಿದ್ದಾರೆ ಎನ್ನಲಾದ ಪ್ರಕರಣದ ವಿಚಾರಣೆ ಬಾಕಿ ಇದೆ. ಹಿಂದಿನ ಪೌರಾಯುಕ್ತ ಪ್ರಶಾಂತ ವರಗಪ್ಪನವರ ಅವರು ಠರಾವಿನಲ್ಲಿರುವ ತಮ್ಮ ಸಹಿ ನಕಲಿಯಾಗಿದೆ ಎಂದು ಆರೋಪಿಸಿ ದಾಖಲಿಸಿರುವ ಎಫ್ಐಆರ್ ಪ್ರಕರಣವೂ ವಿಚಾರಣೆಯ ಹಂತದಲ್ಲಿದೆ. ಹೀಗಾಗಿ, ಹೈಕೋರ್ಟ್ನ ಸದರಿ ತೀರ್ಪಿನ ಹೊರತಾಗಿಯೂ ಗದಗ ನಗರಸಭೆಯ ಅಧಿಕಾರಕ್ಕಾಗಿ ನಡೆಯುತ್ತಿರುವ ಗುದ್ದಾಟ ಮುಂದುವರೆಯಲಿದೆ.



