ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಸವರಾಜ ಎಂ.ಯರಗುಪ್ಪಿಯವರು ಕಪ್ಪತ್ತಗಿರಿ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆ ರಾಜ್ಯ ಘಟಕ ಗದಗ-ಕಳಸಾಪೂರ ಅವರ ವತಿಯಿಂದ ಕೊಡ ಮಾಡುವ 2023-24ನೇ ಸಾಲಿನ ಶಿಕ್ಷಣ ಕ್ಷೇತ್ರದ ವಿಶೇಷ ವ್ಯಕ್ತಿಗಳ ವಿಭಾಗದಲ್ಲಿ ರಾಜ್ಯ ಮಟ್ಟದ `ಸೇವಾ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಸ್ತುತ ಶಿರಹಟ್ಟಿ ಬಿಆರ್‌ಸಿ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾಗಿ, ಮಕ್ಕಳ ಮತ್ತು ಸಮುದಾಯದ ಒಡನಾಡಿಗಳಾಗಿ, ತಾಲ್ಲೂಕು ಅಷ್ಟೇ ಅಲ್ಲದೆ ಜಿಲ್ಲೆ ಹಾಗೂ ರಾಜ್ಯದಾದ್ಯಂತ ವರ್ಷವಿಡೀ ಪ್ರತಿದಿನದ ವಿಶೇಷ ಸಂಗತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆ ದಿನದ ಮಹತ್ವವನ್ನು ತಿಳಿಸಿಕೊಡುವ ಮೂಲಕ ಸಕ್ರಿಯರಾಗಿದ್ದಾರೆ. ಈ ಮೂಲಕ ಅವರು ಸಮಾಜದ ಓದುವ ಮತ್ತು ಉದ್ಯೋಗ ಅರಸುತ್ತಿರುವ ಯುವಕರಿಗೆ ಅವಶ್ಯಕ ಮಾಹಿತಿ ನೀಡುತ್ತಿರುವದು ಶ್ಲಾಘನೀಯ.
ಈ ಎಲ್ಲಾ ಸೇವಾ ಕಾರ್ಯಗಳನ್ನು ಪರಿಗಣಿಸಿ ಶಿಕ್ಷಣ ಕ್ಷೇತ್ರದ ವಿಶೇಷ ವ್ಯಕ್ತಿಗಳ ವಿಭಾಗದಲ್ಲಿ ರಾಜ್ಯ ಮಟ್ಟದ `ಸೇವಾ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕಪ್ಪತ್ತಗಿರಿ ಫೌಂಡೇಶನ್ ಸಂಚಾಲಕರು ತಿಳಿಸಿದ್ದಾರೆ.
ಸುಕ್ಷೇತ್ರ ಕಪ್ಪತಗುಡ್ಡ, ಕಪ್ಪಮಲ್ಲೇಶ್ವರ ದೈವಿವನ ಕಡಕೋಳ ಅರಣ್ಯ ವಲಯದಲ್ಲಿ ನಡೆಯುವ ಪರಿಸರೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಗುತ್ತದೆ. ಬಸವರಾಜ ಯರಗುಪ್ಪಿ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಸವರಾಜ ಹರಲಾಪುರ, ಚಂದ್ರಕಾಂತ ನೇಕಾರ, ಡಿ.ಡಿ. ಲಮಾಣಿ, ಬಸವರಾಜ ಯತ್ನಳ್ಳಿ, ಎಲ್.ಎನ್. ನಂದೆಣ್ಣವರ, ಗೀತಾ ಹಳ್ಯಾಳ, ಎಂ.ಎಸ್. ಹಿರೇಮಠ, ಡಿ.ಎಲ್. ಪಾಟೀಲ್, ಐ.ಎ. ನೀರಲಗಿ ಪಾಟೀಲ್ ಮುಂತಾದವರು ಅಭಿನಂದಿಸಿದ್ದಾರೆ.



