ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಗುರುವಾರ ಸಂಜೆ ಜೋರಾಗಿ ಮಳೆ ಸುರಿದ ಪರಿಣಾಮ ಪೇಟೆಯಲ್ಲಿ ಸೇರಿದ್ದ ಸಾವಿರಾರು ಜನರು ಪರದಾಡುವಂತಾಯಿತು. ಸಂಜೆ ಸುಮಾರು 7 ಗಂಟೆಗೆ ಆರಂಭವಾದ ಮಳೆ ಅರ್ಧ ಗಂಟೆ ನಿರಂತರವಾಗಿ ಸುರಿಯಿತು.
ಬಿಡದೇ ಸುರಿದ ಮಳೆಗೆ ಬಜಾರದಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯಿತು. ಇದರಿಂದಾಗಿ ದಸರಾ ಹಬ್ಬದ ಖರೀದಿಗಾಗಿ ಸಂತೆಗೆ ಬಂದಿದ್ದ ಸಾರ್ವಜನಿಕರು ರಾಡಿ ನೀರಿನಲ್ಲಿಯೇ ಹಬ್ಬದ ಖರೀದಿ ಮಾಡಿದರು. ಶುಕ್ರವಾರ ಖಂಡೆ ಪೂಜೆ ಇರುವುದರಿಂದ ಗುರುವಾರ ಲಕ್ಷ್ಮೇಶ್ವರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಜನ ಪೇಟೆಗೆ ಬಂದಿದ್ದರು.
ಚರಂಡಿ ಕಟ್ಟಿಕೊಂಡಿದ್ದರಿಂದ ಮುಂದೆ ಹರಿದು ಹೋಗಬೇಕಾಗಿದ್ದ ಗಲೀಜು ನೀರು ಏಕಾಏಕಿ ರಸ್ತೆ ಮೇಲೆ ನುಗ್ಗಿತು. ರಾಡಿ ನೀರು ಒಮ್ಮೆಲೇ ರಸ್ತೆ ಮೇಲೆ ಬಂದ ಪರಿಣಾಮ ಜನರಿಗೆ ಕಿರಿಕಿರಿ ಉಂಟಾಯಿತು. ಪ್ರತಿ ಮಳೆಗಾಲದಲ್ಲಿ ಈ ರೀತಿ ಚರಂಡಿ ರಸ್ತೆ ಮೇಲೆ ಹರಿಯುತ್ತದೆ. ಆದರೂ ಕೂಡ ಸಂಬಂಧಿಸಿದ ಪುರಸಭೆ ಅಧಿಕಾರಿಗಳು ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸಿದರು.