ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದಲ್ಲಿರುವ ಒಂದು ಅಪಾರ್ಟ್ಮೆಂಟ್ ನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.
ಹತ್ತು ವರ್ಷದ ಅಪ್ರಾಪ್ತಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಆರ್ಯನ್ ಕುಮಾರ್ ಎಂಬಾತನನ್ನು ಕುಂಬಳಗೋಡು ಪೊಲೀಸರು ಬಂಧಿಸಿದ್ದಾರೆ.
ಇದೇ ತಿಂಗಳ ಮೊದಲನೇ ತಾರೀಖು ಘಟನೆ ನಡೆದಿದ್ದು, ಇದೀಗ ತಡವಾಗಿ ಮಾಹಿತಿ ಬಹಿರಂಗವಾಗಿದೆ. ಪೊಲೀಸರ ಪ್ರಕಾರ, ಆರ್ಯನ್ ಕುಮಾರ್ ಬಾಲಕಿಯನ್ನ ಪುಸಲಾಯಿಸಿ, ಖಾಸಗಿ ಅಂಗಾಂಗಗಳಿಗೆ ಮುಟ್ಟಿದ ಹಿನ್ನೆಲೆಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಾಲಕಿ ಈ ಬಗ್ಗೆ ತನ್ನ ತಾಯಿಗೆ ವಿವರವಾಗಿ ಹೇಳಿದ್ದಾಳೆ.
ತಕ್ಷಣವೇ ಎಚ್ಚೆತ್ತ ಪೋಷಕರು ಅಪಾರ್ಟ್ಮೆಂಟ್ ನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಆರೋಪಿಯ ಕೃತ್ಯ ದೃಢಪಟ್ಟಿದೆ.
ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಕುಂಬಳಗೋಡು ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.