ಬೆಂಗಳೂರು: ಏಳು ವರ್ಷಗಳ ಹಿಂದೆ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಇಬ್ಬರು ಪ್ರಮುಖ ನಟರಿಗೆ ಕರ್ನಾಟಕ ಹೈಕೋರ್ಟ್ ಕ್ಲೀನ್ ಚಿಟ್ ನೀಡಿದೆ.
ಸಾಧು ಕೋಕಿಲಾ ಮತ್ತು ಮಂಡ್ಯ ರಮೇಶ್ ವಿರುದ್ಧ 2017ರಲ್ಲಿ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಾರ್ಲರ್ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಮಸಾಜ್ ವೇಳೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ದೂರು ನೀಡಿದ್ದರು. ಈ ಪ್ರಕರಣದಲ್ಲಿ ನಟರಿಗೆ ಸಮನ್ಸ್ ಜಾರಿಯಾಗಿದ್ದು, ವಿಚಾರಣೆ ಆರಂಭವಾಗುವ ಹಂತದಲ್ಲಿತ್ತು.
2019ರಲ್ಲಿ ಹೈಕೋರ್ಟ್ ವಿಚಾರಣೆಗೆ ತಾತ್ಕಾಲಿಕ ತಡೆ ನೀಡಿತ್ತು. ನಂತರ ಪ್ರಕರಣ ರದ್ದುಗೊಳಿಸುವಂತೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ಪೀಠ, ಎಫ್ಐಆರ್ನಲ್ಲಿ ಸ್ಪಷ್ಟ ಆರೋಪಗಳ ಕೊರತೆ ಹಾಗೂ ಸಮರ್ಪಕ ಸಾಕ್ಷ್ಯಾಧಾರಗಳ ಅಭಾವವನ್ನು ಉಲ್ಲೇಖಿಸಿ ಪ್ರಕರಣವನ್ನು ರದ್ದುಪಡಿಸಿದೆ.
ನಟರ ಪರವಾಗಿ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ವಾದ ಮಂಡಿಸಿದ್ದರು. ಆರೋಪ ಸಾಬೀತುಪಡಿಸಲು ಅಗತ್ಯವಾದ ಕಾನೂನು ಮಾನದಂಡಗಳು ಪೂರೈಸಲಾಗಿಲ್ಲ ಎಂದು ವಾದಿಸಲಾಯಿತು.
ಈ ತೀರ್ಪು ಸಿನಿಮಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣದ ಅಂತ್ಯಕ್ಕೆ ತೆರೆ ಬಿದ್ದಂತಾಗಿದೆ.



