ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಯಶ್ ದಯಾಳ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಮಹಿಳೆಯೋರ್ವರು ದೈಹಿಕ ಕಿರುಕುಳದ ಆರೋಪ ಮಾಡಿದ್ದು, ನ್ಯಾಯಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಪೊಲೀಸರಿಗೆ ಮನವಿ ಕೂಡ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಸಿಎಂ ಹೆಲ್ಪ್‌ಲೈನ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದು, ಅದರ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಜಾಲತಾಣಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಮಹಿಳೆ ದಯಾಳ್ ಜೊತೆಗಿನ ತನ್ನ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಕಳೆದ 5 ವರ್ಷಗಳಿಂದ ದಯಾಳ್ ಜೊತೆ ಸಂಬಂಧ ಹೊಂದಿದ್ದು, ದಯಾಳ್ ಮದುವೆಯಾಗುವುದಾಗಿ ನಂಬಿಸಿ ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ತನ್ನನ್ನು ಶೋಷಿಸಿದ್ದಾರೆ. ಅಲ್ಲದೆ ದಯಾಳ್ ನನ್ನನ್ನು ನಿಮ್ಮ ಭಾವಿ ಸೊಸೆ ಎಂದು ಅವರ ಕುಟುಂಬಕ್ಕೆ ಪರಿಚಯಿಸಿ, ಆ ಬಳಿಕ ನನಗೆ ವಂಚಿಸಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ದಯಾಳ್ ನನ್ನೊಂದಿಗೆ ಮಾತ್ರವಲ್ಲದೆ ಅನೇಕ ಮಹಿಳೆಯರೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾರೆ ಎಂದು ದೂರುದಾರೆ ಆರೋಪಿಸಿದ್ದಾರೆ. ಈ ಬಗ್ಗೆ ನಾನು ಜೂನ್ 14 ರಂದು ಮಹಿಳಾ ಸಹಾಯವಾಣಿಗೆ ಪ್ರಕರಣದ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಸಂತ್ರಸ್ತೆ ಪೊಲೀಸರ ವಿರುದ್ಧವೂ ಆರೋಪ ಹೊರಿಸಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು, ಇದೀಗ ತನಿಖೆ ಕೈಗೊಂಡಿದ್ದಾರೆ.