ರಾಮನಗರ:- ಗಣೇಶ ಮೂರ್ತಿ ಮೆರವಣಿಗೆ ವೇಳೆ ಮಹಿಳೆ ಮೈಕೈ ಮುಟ್ಟಿ ಅನುಚಿತ ವರ್ತನೆ ತೋರಿದ ಬಿಜೆಪಿ ಮಂಡಲ ಅಧ್ಯಕ್ಷನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಚನ್ನಪಟ್ಟಣ ಗ್ರಾಮಾಂತರ ಬಿಜೆಪಿ ಮಂಡಲದ ಅಧ್ಯಕ್ಷ ಟಿ.ಎಸ್. ರಾಜು ಎನ್ನುವರು ಗಣೇಶನ ಮೆರವಣಿಗೆ ವೇಳೆ ಮಹಿಳೆಯೊಬ್ಬರ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದು, ಈ ಬಗ್ಗೆ ಸಂತ್ರಸ್ತ ಮಹಿಳೆ ರಾಜು ವಿರುದ್ಧ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಸಿದ್ದಾರೆ.
ಅತ್ತ ದೂರು ದಾಖಲಾಗುತ್ತಿದ್ದಂತೆಯೇ ಇತ್ತ ಬಿಜೆಪಿಯಿಂದ ಟಿ.ಎಸ್.ರಾಜುರನ್ನ ಅಮಾನತು ಮಾಡಲಾಗಿದೆ. ಸೆಪ್ಟೆಂಬರ್ 7ರ ರಾತ್ರಿ 11:45 ಸುಮಾರಿಗೆ ಗಣೇಶ ಮೆರವಣಿಗೆ ನೋಡಲು ಮನೆ ಹೊರಗಡೆ ನಿಂತಿದ್ದ ವೇಳೆ ರಾಜು, ಮಹಿಳೆಯನ್ನು ಹಿಂದಿನಿಂದ ಬಂದು ಯಾವಾಗ ಬಂದೆ ಬೇಬಿ ಹೆಗಲ ಮೇಲೆ ಕೈ ಹಾಕಿ, ಬಳಿಕ ಎದೆಗೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಅಲ್ಲದೇ ಫೋಟೋ ತೆಗೆದು ಇತರರಿಗೆ ಕಳಿಸಿದ್ದಾನೆ ಎಂದು ಆರೋಪಿಸಲಾಗಿದ್ದು, ಸದ್ಯ ಟಿ.ಎಸ್.ರಾಜು ಮೊಬೈಲ್ ಕಸಿದುಕೊಂಡಿರುವ ಮಹಿಳೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ತೂಬಿನಕೆರೆ ಗ್ರಾಮದ ಮಹಿಳೆ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, 2 ದಿನದ ಹಿಂದೆ ಗಣೇಶ ವಿಸರ್ಜನೆ ವೇಳೆ ರಾಜು ನನ್ನ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದು, ನನ್ನ ಮನೆ ಮುಂದೆಯೇ ನನ್ನ ಫೋಟೋ ತೆಗೆದು ರೇಗಿಸಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾಳೆ.
ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿ ಎನ್ ಎಸ್ ಆಕ್ಟ್ ಅಡಿ ಎಫ್ಐಆರ್ ದಾಖಲಾಗಿದೆ. ಇನ್ನು ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಆರೋಪಿ ರಾಜು ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.