ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕಿಂಗ್ 2026ರಲ್ಲಿ ಬಿಡುಗಡೆಯಾಗಲಿದೆ. ಎರಡು ವರ್ಷಗಳ ಬಳಿಕ ಶಾರುಖ್ ಅವರನ್ನು ಮತ್ತೆ ಬೆಳ್ಳಿತೆರೆಯಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಹಿನ್ನೆಲೆಯಲ್ಲಿ, ಈ ಆಕ್ಷನ್ ಥ್ರಿಲ್ಲರ್ ಚಿತ್ರದ ಬಗ್ಗೆ ಭಾರಿ ಕ್ರೇಜ್ ನಿರ್ಮಾಣವಾಗಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ರೊಮ್ಯಾಂಟಿಕ್ ಹಾಡಿನಂತೆ ಕಾಣುವ ಒಂದು ವಿಡಿಯೋ ವೈರಲ್ ಆಗಿದ್ದು, ಇದು ‘ಕಿಂಗ್’ ಚಿತ್ರದ ಲೀಕ್ ಆದ ಹಾಡು ಎನ್ನುವ ಊಹಾಪೋಹಗಳು ಹರಡಿದ್ದವು. ವಿಡಿಯೋದಲ್ಲಿ ಶಾರುಖ್ ಖಾನ್ ಸಾಲ್ಟ್ ಅಂಡ್ ಪೆಪ್ಪರ್ ಲುಕ್ನಲ್ಲಿ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡರೆ, ದೀಪಿಕಾ ಪಡುಕೋಣೆ ಹಸಿರು ಸೀರೆ ಹಾಗೂ ಕೆಂಪು ಡ್ರೆಸ್ನಲ್ಲಿ ಗಮನ ಸೆಳೆದಿದ್ದರು. ವಿಡಿಯೋ ಕೊನೆಯಲ್ಲಿ ಇಬ್ಬರ ಮಧ್ಯೆ ಕಿಸ್ ದೃಶ್ಯವೂ ಇದ್ದುದರಿಂದ ಕುತೂಹಲ ಮತ್ತಷ್ಟು ಹೆಚ್ಚಾಗಿತ್ತು.
ಆದರೆ ಈ ವಿಡಿಯೋ ಅಧಿಕೃತವಾಗಿ ಲೀಕ್ ಆದ ಹಾಡಲ್ಲ ಎಂಬುದು ಇದೀಗ ಸ್ಪಷ್ಟವಾಗಿದೆ. ವರದಿಗಳ ಪ್ರಕಾರ, ಇದು AI ತಂತ್ರಜ್ಞಾನ ಬಳಸಿ ತಯಾರಿಸಲಾದ ಫ್ಯಾನ್-ಮೇಡ್ ಎಡಿಟ್ ಆಗಿದ್ದು, ಅದರ ರೊಮ್ಯಾಂಟಿಕ್ ದೃಶ್ಯಗಳ ಕಾರಣದಿಂದ ವೈರಲ್ ಆಗಿದೆ. ಈ ವಿಷಯ ಹೊರಬಿದ್ದ ಬಳಿಕ ನೆಟ್ಟಿಗರು ವಿಡಿಯೋವನ್ನು AI ಎಡಿಟ್ ಎಂದು ಗುರುತಿಸಿ ಪ್ರತಿಕ್ರಿಯಿಸುತ್ತಿದ್ದಾರೆ.



