ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು. ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿರುವ ಶಾರುಖ್ ಒಡೆತನದ ಐಷಾರಾಮಿ ನಿವಾಸ ‘ಮನ್ನತ್’ ಭಾರತದ ಶ್ರೀಮಂತ ಮತ್ತು ಆಕರ್ಷಕ ಮನೆಗಳಲ್ಲೊಂದು. ಆದ್ರೀಗ ವರದಿಗಳ ಪ್ರಕಾರ, ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಶಾರುಖ್ ಇದೀಗ ಮನ್ನತ್ ತೊರೆದು ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳಲು ಮುಂದಾಗಿದ್ದಾರೆ. ಅಷ್ಟಕ್ಕೂ ಶಾರುಖ್ ಖಾನ್ ಬಾಡಿಗೆ ಮನೆಗೆ ಶಿಫ್ಟ್ ಆಗ್ತಿರೋದು ಯಾಕೆ ಗೊತ್ತಾ?
ವರದಿಗಳ ಪ್ರಕಾರ, ಶಾರುಖ್ ಮುಂಬೈನ ಪಾಲಿ ಹಿಲ್ಸ್‌ನಲ್ಲಿರುವ ಬಾಲಿವುಡ್‌ನ ಭಗ್ನಾನಿ ಕುಟುಂಬದ ಎರಡು ಐಷಾರಾಮಿ ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್‌ಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಈ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದು ನಿರ್ಮಾಪಕ ಜಾಕಿ ಭಗ್ನಾನಿ ಅವರಿಗೆ ಸೇರಿದ್ದಾಗಿದ್ದರೆ, ಮತ್ತೊಂದು ಅವರ ಸಹೋದರಿ ದೀಪ್ಶಿಖಾ ದೇಶ್ಮುಖ್ ಅವರಿಗೆ ಸೇರಿದೆ. ಶಾರುಖ್ ಖಾಣ್ ಅವರ ಮನ್ನತ್‌ನಲ್ಲಿ ನವೀಕರಣ ಕಾರ್ಯ ನಡೆಯುತ್ತಿರುವ ಹಿನ್ನೆಲೆ ಶಾರುಖ್ ಅಲ್ಲಿಂದ ಶಿಫ್ಟ್ ಆಗುತ್ತಿದ್ದಾರೆ. ಮನ್ನತ್ ಗ್ರೇಡ್ III ಹೆರಿಟೇಜ್ ಸ್ಟ್ರಕ್ಚರ್ ಆಗಿರೋ ಹಿನ್ನೆಲೆ, ಇಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಬೇಕೆಂದರೂ ಅನುಮತಿ ಪಡೆಯಬೇಕು. ಹಾಗಾಗಿ ನಟ ನ್ಯಾಯಾಲಯದಿಂದ ಅನುಮತಿ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಶಾರುಖ್ ಕುಟುಂಬ ಶಿಫ್ಟ್ ಆಗುತ್ತಿರುವ ಎರಡೂ ಅಪಾರ್ಟ್‌ಮೆಂಟ್‌ಗಳ ತಿಂಗಳ ಬಾಡಿಗೆ 24.15 ಲಕ್ಷ ರೂಪಾಯಿ. ಫೆಬ್ರವರಿ 14 ರಂದು ಲೀಸ್ ಅಗ್ರಿಮೆಂಟ್ ರಿಜಿಸ್ಟರ್ ಆಗಿದ್ದು, ಒಪ್ಪಂದವು 2.22 ಲಕ್ಷ ರೂಪಾಯಿಯ ಮುದ್ರಾಂಕ ಶುಲ್ಕ ಮತ್ತು 2,000 ರೂಪಾಯಿಗಳ ನೋಂದಣಿ ಮೊತ್ತವನ್ನು ಒಳಗೊಂಡಿದೆ ಎಂದು ವರದಿಯಾಗಿದೆ.
2024ರ ನವೆಂಬರ್ನಲ್ಲಿ, ಶಾರುಖ್ ಪತ್ನಿ ಗೌರಿ ಖಾನ್ ಅವರು ಮನ್ನತ್‌ನ (ತಮ್ಮ ಬಂಗಲೆ/ಮನೆ) ಒಂದು ಭಾಗವನ್ನು ವಿಸ್ತರಿಸಲು ಮಹಾರಾಷ್ಟ್ರ ಕೋಸ್ಟಲ್ ಝೋನ್ ಮ್ಯಾನೇಜ್ಮೆಂಟ್ ಅಥಾರಿಟಿಯಿಂದ ಅನುಮತಿ ಕೋರಿದ್ದರು. ಇದರಲ್ಲಿ, ಮನ್ನತ್ ಹಿಂದಿರುವ 6 ಮಹಡಿಗಳ ಅನೆಕ್ಸ್ ಕಟ್ಟಡಕ್ಕೆ ಎರಡು ಮಹಡಿಗಳನ್ನು ಸೇರಿಸಲು ಅನುಮತಿ ಕೋರಲಾಗಿತ್ತು. ಇದು ಮನೆಯ ವಿಸ್ತೀರ್ಣವನ್ನು 616.02 ಚದರ್ ಮೀಟರ್‌ಗೆ ಹೆಚ್ಚಿಸುತ್ತದೆ. ಇಡೀ ಪ್ರಾಜೆಕ್ಟ್ನ ವೆಚ್ಚ 25 ಕೋಟಿ ರೂಪಾಯಿ. ಮನ್ನತ್ ನವೀಕರಣಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆದ್ರೆ ವರದಿಗಳ ಪ್ರಕಾರ, ಶಾರುಖ್ ಕನಿಷ್ಠ 2 ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ವಾಸಿಸಬೇಕಾಗುತ್ತದೆ. ಆ ಬಳಿಕ ಮನ್ನತ್ ಗೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗುತ್ತಿದೆ.