ದಾವಣಗೆರೆ: ಜಿಲ್ಲೆಯ ಅಪ್ರತಿಮ ನಾಯಕ ಹಾಗೂ ಜನಸೇವೆಯನ್ನೇ ಜೀವನವಾಗಿಸಿಕೊಂಡಿದ್ದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ಇಹಲೋಕ ತ್ಯಜಿಸಿದ್ದು, ಇಂದು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ನಗರದ ಕಲ್ಲೇಶ್ವರ ರೈಸ್ ಮಿಲ್ನಲ್ಲಿ ಪತ್ನಿ ಪಾರ್ವತಮ್ಮ ಅವರ ಸಮಾಧಿಯ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಮಣ್ಣಿನ ಬದಲಿಗೆ ವಿಭೂತಿ ಗಟ್ಟಿಗಳನ್ನು ಬಳಸಿಕೊಂಡು ಪಂಚಪೀಠದ ಸ್ವಾಮೀಜಿಗಳು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ಅವರು ಭಾಗವಹಿಸಿದರು.
ಅಂತ್ಯಕ್ರಿಯೆ ವೇಳೆ ಶಾಮನೂರರ ಪಾರ್ಥಿವ ಶರೀರಕ್ಕೆ ಪೊಲೀಸ್ ಸಿಬ್ಬಂದಿ ತ್ರಿವರ್ಣ ಧ್ವಜ ಹೊದಿಸಿ ಗೌರವ ಸಲ್ಲಿಸಿದರು. ಬಳಿಕ ಧ್ವಜವನ್ನು ಪುತ್ರರು ಸ್ವೀಕರಿಸಿದರು. ರಾಷ್ಟ್ರಗೀತೆಯೊಂದಿಗೆ ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ವಂದನೆ ಸಲ್ಲಿಸಲಾಯಿತು. ನಂತರ ವಾದ್ಯವಂದನೆ ಅರ್ಪಿಸಿ ಒಂದು ನಿಮಿಷ ಮೌನಾಚರಣೆ ಕೈಗೊಳ್ಳಲಾಯಿತು.
ಅಂತಿಮ ದರ್ಶನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರಾದ ಕೆಜೆ ಜಾರ್ಜ್, ಆರ್.ವಿ. ದೇಶಪಾಂಡೆ, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಸುಧಾಕರ್, ಈಶ್ವರ್ ಖಂಡ್ರೆ, ಬಸವರಾಜ ರಾಯರಡ್ಡಿ, ವಿಜಯಾನಂದ ಕಾಶಪ್ಪನವರ್, ವಿಪಕ್ಷ ನಾಯಕ ಆರ್. ಅಶೋಕ್, ಸಿ.ಟಿ. ರವಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಭಾಗವಹಿಸಿದರು. ಜೊತೆಗೆ ಸಿರಿಗೆರೆ ಶ್ರೀಗಳು, ವಚನಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಚರ್ಚ್ ಪಾದ್ರಿಗಳು ಕೂಡ ಅಂತಿಮ ದರ್ಶನ ಪಡೆದರು. ವಿಐಪಿಗಳಿಗಾಗಿ ಸ್ಥಳೀಯ ಪೊಲೀಸ್ ಇಲಾಖೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿತ್ತು.
ಮಾವನ ಅಂತ್ಯಸಂಸ್ಕಾರಕ್ಕೆ ಸೊಸೆ ಪ್ರಭಾ ಮಲ್ಲಿಕಾರ್ಜುನ ಅವರು ನಂದಾದೀಪ ಹಿಡಿದು ತಂದರು. ಕುಟುಂಬದವರು ಬಿಲ್ವಪತ್ರೆ, ಬಾಳೆ ಎಲೆ, ವಿಭೂತಿ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಸಿದ್ಧಗಂಗಾ ಮಠದಿಂದ 100 ವಿಭೂತಿ ಗಟ್ಟಿಗಳನ್ನು ಕಳುಹಿಸಲಾಗಿತ್ತು. ಬಿದಿರು ಪಲ್ಲಕ್ಕಿಯಲ್ಲಿ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ಸ್ಥಳಕ್ಕೆ ತರಲಾಗಿದ್ದು, ವೀರಶೈವ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನೆರವೇರಿದವು. ಇಹಲೋಕ ತ್ಯಜಿಸಿದ ಆತ್ಮಕ್ಕೆ ಮೋಕ್ಷ ಸಿಗಲಿ ಎಂಬ ಪ್ರಾರ್ಥನೆಯೊಂದಿಗೆ ಪೂಜೆ ಸಲ್ಲಿಸಲಾಯಿತು.
ಬೆಂಗಳೂರಿನ ಸದಾಶಿವನಗರ ನಿವಾಸದಿಂದ ಮಧ್ಯರಾತ್ರಿ ಹೊರಟ ಮೃತದೇಹ ಇಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ದಾವಣಗೆರೆಗೆ ತಲುಪಿತು. ಮೊದಲಿಗೆ ಹಿರಿಯ ಪುತ್ರ ಎಸ್.ಎಸ್. ಬಕ್ಕೇಶ್ ನಿವಾಸ, ನಂತರ ಎಸ್.ಎಸ್. ಗಣೇಶ ಅವರ ಮನೆ ಹಾಗೂ ಕೊನೆಯಲ್ಲಿ ಮೂರನೇ ಪುತ್ರ, ಸಚಿವ ಎ.ಎಸ್. ಮಲ್ಲಿಕಾರ್ಜುನ ಅವರ ನಿವಾಸದಲ್ಲಿ ಕಣ್ವೆಕುಪ್ಪೆ ಶ್ರೀಗಳ ಸಮ್ಮುಖದಲ್ಲಿ ವಿಧಿವಿಧಾನ ನೆರವೇರಿಸಲಾಯಿತು. ನಂತರ ಶಾಮನೂರು ನಿವಾಸದ ಮುಂಭಾಗ ಸಾರ್ವಜನಿಕ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಯಿತು. ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ದರ್ಶನ ನಡೆಯಿತು.
ಸಾರ್ವಜನಿಕ ದರ್ಶನದ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಭವ್ಯ ಅಂತಿಮ ಮೆರವಣಿಗೆ ನಡೆಯಿತು. ಹೈಸ್ಕೂಲ್ ಮೈದಾನದಿಂದ ಕಲ್ಲೇಶ್ವರ ರೈಸ್ ಮಿಲ್ವರೆಗೆ ಹಳೇ ಕೋರ್ಟ್ ಮೈದಾನ, ರೇಣುಕಾ ಮಂದಿರ ಸರ್ಕಲ್, ಅರುಣ ಸರ್ಕಲ್, ಹೊಂಡದ ಸರ್ಕಲ್, ದುರ್ಗಾಂಬಿಕ ದೇವಾಲಯ, ಹಗೆದಿಬ್ಬ ಸರ್ಕಲ್, ಕಾಳಿಕಾಂಬ ದೇವಸ್ಥಾನ ರಸ್ತೆ, ಗ್ಯಾಸ್ ಕಟ್ಟೆ ಸರ್ಕಲ್, ಬಕ್ಕೇಶ್ವರ ದೇವಸ್ಥಾನ ಮುಂಭಾಗ, ಹಾಸಭಾವಿ ಸರ್ಕಲ್, ಗಣೇಶ ದೇವಸ್ಥಾನ, ಅರಳಿ ಮರ ಸರ್ಕಲ್ ಹಾಗೂ ವೆಂಕಟೇಶ್ವರ ಸರ್ಕಲ್ ಮೂಲಕ ಅಂತಿಮ ಯಾತ್ರೆ ಸಾಗಿತು.
ಮೆರವಣಿಗೆಯ ಮಾರ್ಗದುದ್ದಕ್ಕೂ ಶಾಮನೂರರ ಭಾವಚಿತ್ರಗಳ ಫ್ಲೆಕ್ಸ್ಗಳನ್ನು ಅಳವಡಿಸಲಾಗಿತ್ತು. ಕ್ಷೇತ್ರದ ನೆಚ್ಚಿನ ನಾಯಕನ ಅಗಲಿಕೆಯಿಂದ ಜನರು ಕಣ್ಣೀರು ಸುರಿಸಿದ್ದು, ಹಲವರು ಪಾರ್ಥಿವ ಶರೀರವಿದ್ದ ವಾಹನಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅಂತಿಮ ವಿದಾಯ ಹೇಳಿದರು.



